ಚನ್ನಪಟ್ಟಣ:ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ಎಂಬ ಖಾಸಗಿ ಆಸ್ಪತ್ರೆ ಇದ್ದು, ಗೋಪಿ ಎಂಬುವವರು ವೈದ್ಯರಾಗಿ ಸೇವೆ ನಿರ್ವಹಿಸುತ್ತಿದ್ದಾರೆ. ವೈದ್ಯಕೀಯಕ್ಕೆ ಸಂಬಂಧಿಸಿದ ಯಾವುದೇ ಪದವಿ ಪಡೆದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿನ ದಿನಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ತಾಲೂಕು ವೈದ್ಯಾಧಿಕಾರಿ ರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆ ಸಂದರ್ಭದಲ್ಲಿ ವೈದ್ಯರು ಮತ್ತು ರೋಗಿಗಳು ಇಲ್ಲದೆ ಆಸ್ಪತ್ರೆಗೆ ಬೀಗ ಜಡಿಯಲಾಗಿತ್ತು. ಇದನ್ನು ಗಮನಿಸಿ ಸ್ಥಳೀಯರೊಂದಿಗೆ ವಿಚಾರ ಮಾಡಿ ಅವರು ವೈದ್ಯರಲ್ಲ ಎಂಬುದನ್ನು ಖಚಿತ ಪಡಿಸಿಕೊಂಡಿದ್ದಾರೆ.
ಆಸ್ಪತ್ರೆಗೆ ವೈದ್ಯರು ಬಂದು ಕೆಲಸ ನಿರ್ವಹಿಸಿದರೆ ತಮಗೆ ವಿಚಾರವನ್ನು ತಿಳಿಸಬೇಕಾಗಿ ರಾಜು ಅವರು ಸ್ಥಳೀಯರಿಗೆ ಮನವಿ ಮಾಡಿದ್ದಾರೆ. ಈ ಹಿಂದೆಯೂ ಸಹ ಹಲವಾರು ಬಾರಿ ಸಾರ್ವಜನಿಕರು ಮೌಖಿಕ ದೂರು ನೀಡಿದ್ದು, ಗೋಪಿ ಅವರ ಪುತ್ರ ಡಾ.ವಂಸತ್ ಅವರು ಸಹ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದು ಹೊಂಗನೂರು ಗ್ರಾಮದಲ್ಲಿರುವ ಗೋಪಿ ಕ್ಲಿನಿಕ್‌ನನ್ನು ನಾನೇ ಮುಂದುವರೆಸುತ್ತೇನೆಂದು ವಸಂತ್ ಹೆಸರಿನಲ್ಲಿ ಪರವಾನಗಿ ಪಡೆದುಕೊಂಡು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಇತ್ತೀಚಿಗೆ ಚನ್ನಪಟ್ಟಣ ನಗರಕ್ಕೆ ಅವರ ಆಸ್ಪತ್ರೆಯನ್ನು ವರ್ಗಾವಣೆ ಮಾಡಿಕೊಳ್ಳುವ ಸಂದರ್ಭದಲ್ಲಿ ಹೊಂಗನೂರಿನಲ್ಲಿರುವ ಗೋಪಿ ಕ್ಲಿನಿಕ್ ಮುಚ್ಚುವುದಾಗಿ ನಗರದಲ್ಲಿ ತೆರೆದಿರುವ ಆಸ್ಪತ್ರೆಗೆ ಪರವಾನಗಿ ನೀಡಬೇಕೆಂದು ತಾಲೂಕು ವೈದ್ಯಾಧಿಕಾರಿಗಳ ಬಳಿ ಪಡೆದುಕೊಂಡಿದ್ದರು. ಸದರಿ ಆಸ್ಪತ್ರೆಯನ್ನು ಮುಚ್ಚದೆ ಅವರ ತಂದೆ ಹೊಂಗನೂರು ಗ್ರಾಮದಲ್ಲಿ ಗೋಪಿ ಕ್ಲಿನಿಕ್ ನಡೆಸುತ್ತಿದ್ದಾರೆ. ಈ ದೂರಿನ ಮೇರೆಗೆ ಡಾ.ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೇ ರೀತಿಯಲ್ಲಿ ಕೋಡಂಬಳ್ಳಿ ಗ್ರಾಮದಲ್ಲಿಯೂ ಸಹ ನಾಲ್ಕು ಕಟ್ಟಡಗಳ ಮಾಲೀಕರು ಯಾವುದೇ ಪರವಾನಗಿ ಪಡೆಯದೆ ಬಿಎ,ಎಂಎಸ್ ಪಡೆದಿರುವಂತ ವೈದ್ಯರಿಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ನಾಲ್ಕು ಮಂದಿ ವೈದ್ಯರು ತಾಲೂಕು ವೈದ್ಯಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪರವಾನಗಿ ಪಡೆದಿಲ್ಲ. ತಾಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರು ಇಲ್ಲದ ಕಾರಣ ಆ ನಾಲ್ಕು ಕ್ಲಿನಿಕ್‌ಗಳಿಗೆ ಬೀಗ ಜಡಿದು ಕಟ್ಟಡದ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಪರವಾನಗಿ ಇಲ್ಲದೆ ಯಾವುದೇ ವೈದ್ಯರು ಆಸ್ಪತ್ರೆ ತೆರೆಯಬಾರದು ಎಂದು ಹೇಳಿದ್ದಾರೆ. ಒಂದು ವೇಳೆ ವೈದ್ಯರು ಬಂದು ಕಾರ್ಯ ನಿರ್ವಹಿಸಿದರೆ ಮಾಹಿತಿ ನೀಡಬೇಕೆಂದು ಸೂಚಿಸಿದ್ದಾರೆ. ಇತ್ತೀಚಿಗೆ ಬಿಎ,ಎಂಎಸ್ ಪದವಿ ಪಡೆದಿರುವ ಹಲವಾರು ವೈದ್ಯರು ಕೆಪಿಎಂಇ ಆಕ್ಟ್‌ನಡಿ ನೊಂದಾಯಿಸಿಕೊಳ್ಳದೆ ಕೆಲಸ ನಿರ್ವಹಿಸುತ್ತಿರುವುದು ಹೆಚ್ಚಾಗುತ್ತಿದೆ. ಬಿಎ, ಎಂಎಸ್ ಪದವಿ ಆಯುರ್ವೇದಕ್ಕೆ ಸಂಬಂಧಿಸಿದ್ದು ಆಲೋಪತಿ ಔಷಧಿ ನೀಡುತ್ತಿದ್ದಾರೆ. ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು, ಪೊಲೀಸರು, ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಸರಿಯಾದ ಕಾನೂನು ಕ್ರಮ ಜರುಗಿಸದೆ ಇದ್ದರೆ ರೋಗಿಗಳಿಗೆ ಜೀವ ಹೋಗುವ ಸಂಭವವಿರುತ್ತದೆ ಎಂದು ಸಾರ್ವಜನಿಕರ ಆಗ್ರಹವಾಗಿದೆ.