*ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿಗಳಿಗೆ ಸುವರ್ಣವಕಾಶದ ಹೆಬ್ಬಾಗಿಲು*

 

ಚನ್ನಪಟ್ಟಣ:ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಎಂದರೆ ಹಲವಾರು ವಿದ್ಯಾರ್ಥಿಗಳು ಮೂಗು ಮುರಿಯುತ್ತಾರೆ, ಕಸಕಡ್ಡಿ ಶೇಖರಣೆ, ಚರಂಡಿ ಸ್ವಚ್ಚತೆ, ಕೆರೆ-ಕಟ್ಟೆ ಶುಚಿಗೊಳಿಸುವುದು ಎಂದಷ್ಟೇ ಕೆಲವು ವಿದ್ಯಾರ್ಥಿಗಳು ತಿಳಿದುಕೊಂಡಿದ್ದಾರೆ, ಹೆಚ್ಚೆಂದರೆ ಶಿಸ್ತು ಅಷ್ಟೇ ಎಂದು ತಿಳಿದುಕೊಂಡಿರುವುದು ಸರಿಯಲ್ಲಾ. ಇವೆಲ್ಲವೂ ಪ್ರತಿ ವಿದ್ಯಾರ್ಥಿಗಳಿಗೂ ಸುವರ್ಣವಕಾಶ ಎಂದು ಕೊಂಡು ಮುಂದುವರಿಯಬೇಕು. ಸಮಾಜದ ಅರಿವು, ಕಷ್ಟಗಳ ಪರಿಚಯ, ಕಲೆಗಳ ಜೊತೆ ಬೆರೆಯುವುದರಿಂದ ನಮಗೆ ಜೀವನದ ಪಾಠ ಕಲಿಸುತ್ತದೆ, ಹಾಗಾಗಿ ರಕ್ತ ಸಂಬಂಧಕ್ಕಿಂತ ಮಿಗಿಲಾದ ಬಾಂಧವ್ಯದಲ್ಲಿ ಒಂದಾದ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯದ ಜೊತೆಗೆ ಅನುಭವವೂ ಆಗಿದೆ.

 

ರಕ್ತ ಸಂಬಂಧಗಳನ್ನೂ ಮೀರಿದ ಬಂಧವಿದು, ಯಾವ ಬಿಂದುವಿನಲ್ಲಿ ಬಂಧಿಸಿದರೂಚಾಚಿ ತೋಳುಗಳನ್ನು ಬಿಗಿದಪ್ಪಿ ಕೊಳ್ಳುವುದೇ ಎನ್ಎಸ್ಎಸ್ ಶಿಬಿರಗಳು.

“ನಮ್ಮ ಪ್ರೀತಿ ನೋವುಗಳನ್ನು ತನ್ನದೆಂದು ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು”

ಇದು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರುಗಳಿಗೆ ಭಾವನಾತ್ಮಕವಾಗಿ ಆತ್ಮೀಯವಾದ ಸಾಹಿತ್ಯವಾಗಿದೆ. ಎನ್ಎಸ್ಎಸ್ ಕೇವಲ ಒಂದು ಯೋಜನೆಯಾಗಿರದೆ. ಒಂದು ಸುಂದರ ಸಂಬಂಧಗಳನ್ನು ಸೃಷ್ಟಿಸುವ ತಾಣವಾಗಿದೆ. ಎಲ್ಲಾ ಸ್ವಯಂ ಸೇವಕರುಗಳು ಸ್ನೇಹ ಸಂಬಂಧದಲ್ಲಿ ಬಂಧಿಯಾಗಿ ಕೂಡು ಕುಟುಂಬದಂತೆ ಜೊತೆಯಾಗಿ ಬೆಸೆಯುತ್ತಾರೆ. ಪ್ರತಿಭೆಗಳಿಗೆ ತಕ್ಕ ಅವಕಾಶವನ್ನು ಸೃಷ್ಟಿಸುವ ಮಹಾ ಮನೆಯಾಗಿರುವ ಎನ್ಎಸ್ಎಸ್ ಒಂದು ಅವಿಭಕ್ತ ಕುಟುಂಬದಂತೆ ಬೆಳೆದು ನಿಂತಿದೆ.

“ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳಿಗಿಂತ ಕೈಯಲ್ಲಿರುವ ಹಣತೆ ಹೆಚ್ಚು ಬೆಳಕು ನೀಡುತ್ತದೆ” . ಹಾಗೆಯೇ ನಾವು ಅತೀ ಎತ್ತರದ ಆದರ್ಶ ವ್ಯಕ್ತಿಗಳನ್ನು ಅನುಸರಿಸುವುದು ಸ್ವಲ್ಪ ಕಷ್ಟ. ಆದರೆ ನಮ್ಮ ಸುತ್ತ ಮುತ್ತಲೇ ಅಗಾಧ ಸ್ಪೂರ್ತಿಯ ಚಿಲುಮೆಯಾಗಿರುವ ವ್ಯಕ್ತಿತ್ವಗಳು ಕಾಣಸಿಗುತ್ತಾರೆ. ಎನ್ಎಸ್ಎಸ್ ಕೂಡ ಅಪಾರ ಸ್ಪೂರ್ತಿಯ ಚಿಲುಮೆಗಳನ್ನು ಹೊಂದಿರುವ ತಾಣವಾಗಿದೆ. ಸ್ವಯಂ ಸೇವಕರುಗಳ ಪ್ರತಿಭೆ, ಸೇವಾ ಮನೋಭಾವ, ಕಲಾ ಕೌಶಲ, ಸಮಯ ಪ್ರಜ್ಞೆ, ಶಿಸ್ತು ಹಾಗೂ ಸಮರ್ಪಣಾ ಭಾವದಂತಹ ನೈತಿಕ ಮೌಲ್ಯಗಳು ಇತರ ವಿದ್ಯಾರ್ಥಿಗಳಿಗೂ ಸಹ ಪ್ರೇರೇಪಣೆ ನೀಡುತ್ತವೆ, ವಿಶೇಷವಾಗಿ ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರುಗಳು, ಎನ್ಎಸ್ಎಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮೊದಲಿಗರಾಗಿರುವುದು ನಮ್ಮ ಕಾಲೇಜಿನ ಹೆಮ್ಮೆಯಾಗಿದೆ.

ಎನ್ಎಸ್ಎಸ್ ಶಿಬಿರಗಳಿಂದ ರಾಷ್ಟ್ರ, ರಾಜ್ಯಮಟ್ಟದಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸುವ ಅವಕಾಶ, ಯೂತ್ ಫೆಸ್ಟ್, ನ್ಯಾಷನಲ್ ಇಂಟಿಗ್ರೇಷನ್ ಶಿಬಿರಗಳು, ವಾರ್ಷಿಕ ವಿಶೇಷ ಶಿಬಿರಗಳು, ವಿಶೇಷ ಉಪನ್ಯಾಸ ಕೇಳುವುದು, ಹೀಗೆ ಅನೇಕ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸದಾವಕಾಶ ದೊರೆಯುತ್ತದೆ. ನಮ್ಮ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿಗಳಾದ ಮಹೇಶ್ ಹಾಗೂ ಆಲಿಯಾ ತಾಜ್ ಎಂಬ ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸುವ ಮೂಲಕ ನಮ್ಮ ಕಾಲೇಜಿನ ಗರಿಮೆಯನ್ನಷ್ಟೇ ಅಲ್ಲದೇ ತಾಲ್ಲೂಕು ಹಾಗೂ ಜಿಲ್ಲೆಯ ಗೌರವವನ್ನು ಹೆಚ್ಚಿಸಿದ್ದಾರೆ.

ಎನ್ಎಸ್ಎಸ್ ಕೇವಲ ಶಿಸ್ತು ಹಾಗೂ ಸೇವೆಗೆ ಮಾತ್ರ ಸೀಮಿತವಾಗಿರದೆ, ಜಾನಪದ ಕಲೆಗಳ ಉಳಿವಿನಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ‘ಹಳೆ ಬೇರು ಹೊಸ ಚಿಗುರು’ ಎಂಬ ನಾಣ್ಣುಡಿಯಂತೆ ಭಾರತೀಯ ಸಂಸ್ಕೃತಿಯ ತಳಹದಿಯಾದ ಜಾನಪದ ಕಲೆಗಳನ್ನು ವಿಭಿನ್ನವಾಗಿ ಅಭಿವ್ಯಕ್ತಗೊಳಿಸುವಲ್ಲಿ ಎನ್ಎಸ್ಎಸ್ ವಿಶಿಷ್ಟ ಮಾರ್ಗವಾಗಿ ರೂಪುಗೊಂಡಿದೆ. ಕಾಲಾಂತರದ ತೀವ್ರತೆಗೆ ಹುದುಗಿಹೋಗಿ ಎಲೆ ಮರೆ ಕಾಯಿಯಾಗಿ, ಹಿಂದೆ ಸರಿಯುತ್ತಿದ್ದಾಗ ಅವುಗಳ ಸಾರವನ್ನು ಅರಿತು, ತನ್ನ ಸ್ವಯಂಸೇವಕರ ಸೈನ್ಯದೊಂದಿಗೆ ದೀಪದಂತೆ ಉಜ್ವಲವಾಗಿ ಪ್ರಜ್ವಲಿಸುವಂತೆ ಮಾಡುತ್ತಿದೆ ಎನ್ಎಸ್ಎಸ್ ಶಿಬಿರಗಳು.

ಕಲೆ ಎಂಬುದು ಪ್ರತಿ ಮನುಷ್ಯನಿಗೂ ಅತ್ಯವಶ್ಯಕ, ಕಲೆಯ ಬೆಲೆ ಅರಿತರೆ ಸಮಾಜದಲ್ಲಿ ಹೇಗೆ ಬದುಕುಬೇಕೆಂಬ ಅರಿವು ಮೂಡುತ್ತದೆ. ಇಂತಹ ಜಾನಪದ ಕಲೆಗಳನ್ನು ಭವಿಷ್ಯದ ಪ್ರಜ್ಞಾವಂತ ಯುವಕರಿಗೆ ಕಲಿಸಲಾಗುತ್ತದೆ. ನಮ್ಮದೇ ನೆಲದ ಮಣ್ಣಿನ ಕಲೆಗಳನ್ನು ಮಣ್ಣಿನ ಮಕ್ಕಳು ಬಹಳ ಶ್ರದ್ಧೆಯಿಂದ ಅಭ್ಯಾಸ ಮಾಡಿ ಕಾರ್ಯಕ್ರಮಗಳಲ್ಲಿ ಅಮೋಘವಾಗಿ ಪ್ರದರ್ಶನ ನೀಡುತ್ತಾರೆ. ದೀಪ ಬೆಳಗಲು ಎಣ್ಣೆಯ ಅವಶ್ಯಕವಿದ್ದಂತೆ ಜಾನಪದ ಕಲೆಯೆಂಬ ದೀಪ ಬೆಳಗಲು ಅದಕ್ಕೆ ಶಕ್ತಿ ನೀಡುವ ಎಣ್ಣೆಯ ರೀತಿ ಎನ್ಎಸ್ಎಸ್ ತನ್ನದೇ ಆದ ಕೊಡುಗೆ ನೀಡುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ನಮ್ಮ ಕಾಲೇಜು ಮಹತ್ತರ ಹೆಜ್ಜೆಯನ್ನಿಟ್ಟಿತು. ಜೂನ್ 27 ರಂದು ’ಜಾನಪದ ಕಲೋತ್ಸವ ‘ ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿ ರಾಜ್ಯದ ಇಡೀ ವಿಶ್ವವಿದ್ಯಾಲಯ ಗಳನ್ನು ಆಹ್ವಾನಿಸಿ ಹಲವು ಪ್ರತಿಭೆಗಳ ಅನಾವರಣದ ಜೊತೆಗೆ ಜಾನಪದ ಕಲೆಗಳನ್ನು ವಿಜೃಂಭಿಸುವ ಸುಂದರ ಹಬ್ಬದಂತೆ ಸಂಭ್ರಮಿಸಲಾಯಿತು.

ಇತರ ರಾಷ್ಟೀಯ ಸೇವಾ ಯೋಜನೆಗಳ ಮಧ್ಯೆ ನಮ್ಮ ಕಾಲೇಜಿನ ಎನ್ಎಸ್ಎಸ್ ಶಿಬಿರಗಳು ವಿಭಿನ್ನವಾಗಿ ಹಾಗೂ ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿರುವುದು ಎನ್ಎಸ್ಎಸ್ ನ ಕಾರ್ಯಕ್ರಮಗಳ ಅಧಿಕಾರಿಗಳಾದಂತಹ ಶ್ರೀಕಾಂತ್ ಎನ್. ಹಾಗೂ ನಂಜುಂಡ .ಆರ್. ಅವರಿಂದ. ಇವರಿಬ್ಬರು ಕಾಲೇಜಿನ ಕೀರ್ತಿ ಕಳಸವಾಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿದ್ದು, ವಿದ್ಯಾರ್ಥಿಗಳನ್ನು ನಕ್ಷತ್ರ ಗಳ ರೀತಿ ಮಿನುಗುವಂತೆ ಮಾಡುವಲ್ಲಿ ಈ ಅಧಿಕಾರಿಗಳ ಪಾತ್ರ ಅವಿಸ್ಮರಣೀಯವಾಗಿದೆ.

ನಮ್ಮ ಕಾಲೇಜಿನಲ್ಲಿ ಒಂದು ವಿಶಾಲ ವೃಕ್ಷದಂತೆ ಬೆಳೆದು ನಿಂತಿರುವ ಎನ್ಎಸ್ಎಸ್ ಅದ್ಭುತ ಜಾನಪದ ಪ್ರತಿಭೆಗಳ ಗಣಿಯೂ ಆಗಿದೆ . ಎನ್ಎಸ್ಎಸ್ ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಭೆಗಳನ್ನು ಹಾಗೂ ಜಾನಪದ ಕಲೆಗಳನ್ನು ಪೋಷಿಸಿ, ಮುನ್ನಡೆಸಿ ಬೆಳೆಸುವ ಪಾಲಕನಾಗಿದೆ. ಪ್ರತಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರೆ ವಿದ್ಯಾರ್ಥಿಗಳ ಭವಿಷ್ಯದ ಬದುಕು ಬಂಗಾರವಾಗುತ್ತದೆ.

— -ಅನ್ನಪೂರ್ಣ ಎಂ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಪಟ್ಟಣ.

Share & Spread
error: Content is protected !!