ಚನ್ನಪಟ್ಟಣ:ಪುರಾಣೇತೀಹಾಸದಿಂದಲೂ ಪ್ರಖ್ಯಾತವಾಗಿರುವ ಔಷಧ ಎಂದರೆ ಅದು ಆಯುರ್ವೇದ ಔಷಧ, ಜಗತ್ತಿನ ಅತ್ಯಂತ ಪ್ರಾಚೀನ ಔಷಧವೂ ಹೌದು, ನಮ್ಮ ಪ್ರಕೃತಿ ಹೇಗೆ ಸಮತೋಲನ ಕಾಯ್ದುಕೊಳ್ಳುತ್ತಿದೆಯೋ ಹಾಗೆ ಆಯುರ್ವೇದ ಔಷಧವೂ ಸಹ ರೋಗಿಯ ದೇಹದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
ಪುರಾತನ ಹಿನ್ನೆಲೆಯುಳ್ಳ ಆಯುರ್ವೇದ ಔಷಧಿಗಳಿಗೆ ಇಂದಿಗೂ ಸಾಕಷ್ಟು ಶಕ್ತಿಯಿದೆ. ಆದರೆ, ಇದರ ಬಗ್ಗೆ ಆಳವಾದ ಅರಿವು ಇಲ್ಲದ ಕಾರಣ ಬಳಕೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಅರಿವು ಮೂಡಿಸುವುದು ನಮ್ಮ ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದೆ ಎಂದು ದೀರ್ಘಾಯು ವೆಲ್ನೆಸ್ ಸೆಂಟರ್ ಸ್ಥಾಪಕಿ ಹಾಗೂ ವೈದ್ಯೆ ಸಹನಾ ತಿಳಿಸಿದರು.
ಇತ್ತೀಚೆಗೆ ಹಲವಾರು ಮಾದರಿಯ ಔಷಧೋಪಚಾರಗಳು ಲಭ್ಯವಿದೆ, ಆಯುರ್ವೇದ ಚಿಕಿತ್ಸೆಗೆ ವಿಶೇಷ ಸ್ಥಾನಮಾನವಿದೆ, ನಮ್ಮ ಪುರಾತನ ಆಯುರ್ವೇದ ಚಿಕಿತ್ಸೆ ಬಗ್ಗೆ ನಮ್ಮಲ್ಲೆ ಹಲವರಿಗೆ ಕೀಳರಿಮೆ ಇರುವ ಕಾರಣ ಆಯುರ್ವೇದ ಚಿಕಿತ್ಸೆ ಬಗ್ಗೆ ಹಿಂಜರಿಕೆ ಇದೆ. ಆಯುರ್ವೇದ ಚಿಕಿತ್ಸೆಯಲ್ಲಿ ಸಾಕಷ್ಟು ಅನುಕೂಲವಿದೆ. ಸುಧೀರ್ಘವಾಗಿ ಹೋರಾಡುವ ಗುಣವಿದೆ. ಹಲವು ರೋಗರುಜಿನಗಳಿಗೆ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ ರಾಮಬಾಣವಾಗಿದ್ದು, ಆಯುರ್ವೇದದ ಬಗ್ಗೆ ಜನತೆ ಆಸಕ್ತಿ ಮೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸೆಂಟರ್ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು
ಜೈ ಶ್ರೀಕೃಷ್ಣ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ಕೃಷ್ಣ ಕುಮಾರ್ ಮಾತನಾಡಿ, ನಮ್ಮ ಸರ್ಕಾರಗಳು ಆಯುರ್ವೇದ ಔಷಧಿಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಪ್ರಚಾರ ಕಡಿಮೆ ಇದೆ, ಆದರೂ ಸಹ ನಮ್ಮ ಜನತೆ ಆಲೋಪಥಿ ಔಷಧಗಳಿಗೆ ಮಾರು ಹೋಗಿರುವ ಕಾರಣ ನಮ್ಮ ಆಯುರ್ವೇದ ಔಷಧಗಳನ್ನು ಕಡೆಗಣಿಸುತ್ತಿದ್ದಾರೆ. ಅವರಿಗೆ ಇದರ ಬಗ್ಗೆ ಮಾಹಿತಿ ನೀಡಿದರೆ ಅವರೂ ಒಗ್ಗಿಕೊಳ್ಳುತ್ತಾರೆಂಬ ಭರವಸೆ ಇದೆ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ನಮ್ಮ ಸುತ್ತಮುತ್ತಲ ಪರಿಸರದಲ್ಲೆ ಸಿಗುತ್ತಿದ್ದ ಸ್ಥಳೀಯ ಗಿಡಮೂಲಿಕೆಗಳನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಇದೀಗ, ಎಲ್ಲರೂ ಇಂಗ್ಲೀಷ್ ಔಷಧಗಳ ಮೇಲೆ ಹೆಚ್ಚು ಅವಲಂಭಿತರಾಗಿದ್ದಾರೆ. ಪ್ರತಿ ಸಣ್ಣ ವಿಚಾರಕ್ಕೂ ಸಾವಿರಾರು ರೂ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.