ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಭೂಮಿಪೂಜೆ ನೆರವೇರಿಸಿದರು.
ಈ ಮೂಲಕ ಯಲಹಂಕ ವಿಧಾನಸಭಾ ಕ್ಷೇತ್ರದ 17 ಗ್ರಾಮಗಳ 3546 ಎಕರೆ ಪ್ರದೇಶದಲ್ಲಿ ಸುಮಾರು 22 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಿ ರೈತರು ಮತ್ತು ಸಾರ್ವಜನಿಕರಿಗೆ ಹಂಚಿಕೆ ಮಾಡುವ ಗುರಿಯೊಂದಿಗೆ ರಾಜ್ಯ ಸರ್ಕಾರ ಮತ್ತು ಬಿಡಿಎದ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ದೊರೆತಂತಾಗಿದೆ.
ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ವಿಶ್ವನಾಥ್ ಅವರು, ಈ ಹಿಂದಿನ ಬಡಾವಣೆಗಳಂತೆ ಇದು ಸಹ ಆಗುತ್ತದೆ ಎನ್ನುವ ಆತಂಕ ಇತ್ತು. ಆದರೆ, ಸುಪ್ರಿಂ ಕೋರ್ಟ್ ಸಮಿತಿಯೊಂದನ್ನು ರಚಿಸಿ ಬಡಾವಣೆ ನಿರ್ಮಿಸಲು ಅನುಮತಿ ನೀಡಿದೆ ಎಂದರು.
ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ
ರೈತರು ತಮಗೆ ಹಣದ ರೂಪದಲ್ಲಿ ಅಥವಾ 60:40 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಪಡೆಯಬಹುದಾಗಿದೆ. ಯಾವುದೇ ಸಮಸ್ಯೆಗಳಿದ್ದರೂ ಬಿಡಿಎ ಜೊತೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ರೈತರಿಗೆ ಮನವಿ ಮಾಡಿದ ಅವರು, ಈ ವಿಚಾರದಲ್ಲಿ ರೈತರೊಂದಿಗೆ ನಾನು ಕೈಜೋಡಿಸುತ್ತೇನೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಕಾರಂತ ಬಡಾವಣೆಗೆ ಭೂಸ್ವಾಧೀನ ಅಧಿಸೂಚನೆ ಹೊರಡಿಸಿದ ಜಾಗದಲ್ಲಿ ಸುಮಾರು 4500 ಮನೆಗಳನ್ನು ನೆಲಸಮ ಮಾಡಬೇಕಿತ್ತು. ನಾವು ಸುಪ್ರೀಂಕೋರ್ಟ್ ಸಮಿತಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಮನೆಗಳನ್ನು ನೆಲಸಮ ಮಾಡದಿರುವ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೇ, ಸುಮಾರು 5,000 ರೆವಿನ್ಯೂ ನಿವೇಶನದಾರರಿಗೆ ನಿಗದಿತ ಶುಲ್ಕ ಕಟ್ಟಿಸಿಕೊಂಡು ಬದಲಿ ನಿವೇಶನ ನೀಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
18 ತಿಂಗಳಲ್ಲಿ ಕಾಮಗಾರಿ ಪೂರ್ಣಕ್ಕೆ ಸಂಕಲ್ಪ
ನಗರದ ಸಾವಿರಾರು ನಾಗರಿಕರು ತಮ್ಮ ಕನಸಿನ ನಿವೇಶನವನ್ನು ಖರೀದಿಸಲು ಹಲವು ವರ್ಷಗಳಿಂದ ತುದಿಗಾಲ ಮೇಲೆ ನಿಂತಿದ್ದಾರೆ. ಬಡಾವಣೆ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದ್ದು, ಮುಂದಿನ 18 ತಿಂಗಳಲ್ಲಿ ಮನೆ ನಿರ್ಮಾಣಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.
ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂಬ ಕಾರಣದಿಂದ 17 ಗ್ರಾಮಗಳಲ್ಲಿ 9 ಪ್ಯಾಕೇಜ್ ಗಳನ್ನು ಮಾಡಿ ಏಕಕಾಲಕ್ಕೆ ಎಲ್ಲಾ ಪ್ಯಾಕೇಜ್ ಗಳ ಕಾಮಗಾರಿಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಮಾದರಿ ಬಡಾವಣೆ ನಿರ್ಮಾಣ
ಹಲವು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಬಡಾವಣೆ ಇದಾಗಲಿದ್ದು, ಬೆಂಗಳೂರು ನಗರದಲ್ಲಿ ಇರುವ ಇತರೆ ಬಡಾವಣೆಗಳಿಗಿಂತ ಸುಸಜ್ಜಿತವಾಗಿ ಮತ್ತು ಮಾದರಿ ಬಡಾವಣೆ ಆಗಲಿದೆ ಎಂದರು.
ಬಿಡಿಎ ಆಯುಕ್ತ ಕುಮಾರ ನಾಯಕ್ ಮಾತನಾಡಿ, ಬೆಂಗಳೂರು ನಗರದ ವಿಸ್ತರಣೆಯಲ್ಲಿ ರೈತರ ತ್ಯಾಗ ಅತ್ಯಮೂಲ್ಯವಾದುದು. ಕಾರಂತ ಬಡಾವಣೆಗೆ ಭೂಮಿ ನೀಡಿರುವ ರೈತರ ಹಿತ ಕಾಪಾಡುವಲ್ಲಿ ಬಿಡಿಎ ಬದ್ಧವಾಗಿದೆ. ಯಾರಿಗೂ ಕಷ್ಟವಾಗದ ರೀತಿಯಲ್ಲಿ ನಾವು ಬಡಾವಣೆಯನ್ನು ಅಭಿವೃದ್ಧಿಪಡಿಸಲಿದ್ದೇವೆ ಎಂದು ತಿಳಿಸಿದರು