ನವದೆಹಲಿ (ಡಿ.16): ದೆಹಲಿ ದ್ವಾರಕಾದಲ್ಲಿ 17 ವರ್ಷದ ಶಾಲಾ ಬಾಲಕಿಯ ಮೇಲೆ ಆ್ಯಸಿಡ್ ಎರಚಿದವರು ಆಕೆಯ ಗೆಳೆಯರೇ ಆಗಿದ್ದರು. ಆ್ಯಸಿಡ್ ಅನ್ನು ಆನ್‌ಲೈನ್ ಮಾರಾಟ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖೆಯ ನಂತರ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಸಚಿನ್ ಅರೋರಾ (20) ಹಾಗೂ ಆತನ ಇಬ್ಬರು ಗೆಳೆಯರು ಹರ್ಷಿತ್ ಅರ್ಗವಾಲ್ (19) ಹಾಗೂ ವಿರೇಂದರ್ ಸಿಂಗ್ (22) ಈ ಮೂವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆ ವೇಳೆ 2022 ಸೆಪ್ಟೆಂಬರ್‌ವರೆಗೂ ಸಚಿನ್ ಹಾಗೂ ಆ್ಯಸಿಡ್ ಸಂತ್ರಸ್ತೆ ನಡುವೆ ಗೆಳೆತನವಿತ್ತು.
ಸೆಪ್ಟೆಂಬರ್‌ನಲ್ಲಿ ಇಬ್ಬರ ನಡುವಿನ ಸಂಬಂಧ ಹಳಿಸಿದ್ದಕ್ಕೆ ಕೋಪಗೊಂಡ ಸಚಿನ್ ಆ್ಯಸಿಡ್ ದಾಳಿಗೆ ಮುಂದಾದ ಎಂದು ಪೊಲೀಸರು ಹೇಳಿದ್ದಾರೆ. 3ನೇ ಆರೋಪಿ ವಿರೇಂದರ್ ಸಚಿನ್ ಆ್ಯಸಿಡ್ ದಾಳಿ ನಡೆಸುವ ವೇಳೆಯಲ್ಲಿ ಆತನ ಮೊಬೈಲ್ ಹಾಗೂ ವಾಹನವನ್ನು ಬೇರೆಡೆಗೆ ಒಯ್ದು ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಅಲ್ಲದೇ ಆ್ಯಸಿಡ್ ಅನ್ನು ಫ್ಲಿಪ್‌ಕಾರ್ಟ್‌ನಿಂದ ತರಿಸಿಕೊಂಡಿದ್ದರು. ಅರೋರಾ ಇ-ವ್ಯಾಲೆಟ್ ಬಳಸಿ ಆ್ಯಸಿಡ್ ಖರೀದಿಗೆ ಹಣ ಪಾವತಿಸಿದ್ದಾನೆ ಎಂದು ತಿಳಿದುಬಂದಿದೆ. ಬುಧವಾರ ಮುಂಜಾನೆ 7:30 ಸುಮಾರಿಗೆ ರಾಮಾ ಪಾರ್ಕ್‌ನಲ್ಲಿ ಬಾಲಕಿ ತನ್ನ ಸಹೋದರಿ ಜತೆ ನಡೆದುಕೊಂಡು ಹೋಗುತ್ತಿರುವಾಗ ಅರೋರಾ ಹಾಗೂ ಅರ್ಗವಾಲ್ ಮುಸುಕು ಧರಿಸಿ ಬಂದು ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದರು.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಆ್ಯಸಿಡ್ ಮಾರಾಟದ ಮೇಲೆ ನಿರ್ಬಂಧವಿದ್ದರೂ ಆ್ಯಸಿಡ್ ಅನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿರುವುದಕ್ಕೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಳ್ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಚ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ನಿರ್ದಿಷ್ಟಲೈಸೆನ್ಸ್‌ದಾರರು ಮಾತ್ರ ಆ್ಯಸಿಡ್ ಮಾರಬೇಕು ಎಂದು 2013ರಲ್ಲೇ ಸುಪ್ರೀಂ ಕೋರ್ಚ್ ಆದೇಶಿಸಿತ್ತು. “ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಲಭವಾಗಿ ಆ್ಯಸಿಡ್ ಲಭ್ಯತೆ ಗಂಭೀರ ಕಾಳಜಿಯ ವಿಷಯವಾಗಿದೆ ಮತ್ತು ಇದನ್ನು ತುರ್ತಾಗಿ ಪರಿಶೀಲಿಸಬೇಕಾಗಿದೆ” ಎಂದು ಆಯೋಗವು ನೋಟಿಸ್‌ನಲ್ಲಿ ತಿಳಿಸಿದೆ.
ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಆ್ಯಸಿಡ್ ಮಾರಾಟಕ್ಕೆ ಅನುಮತಿ ನೀಡಿದ ಆರೋಪದ ಮೇಲೆ ದೆಹಲಿ ಮಹಿಳಾ ಆಯೋಗವು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ನೋಟಿಸ್ ಜಾರಿ ಮಾಡಿದೆ. ಇನ್ನೊಂದೆಡೆ ಬಾಲಕಿಯ ಮೇಲಿನ ಆ್ಯಸಿಡ್ ದಾಳಿಯನ್ನು ಫ್ಲಿಪ್‌ಕಾರ್ಟ್ ಖಂಡಿಸಿದೆ ಮತ್ತು ಮಾರಾಟಗಾರನನ್ನು ತನ್ನ ವೇದಿಕೆಯಿಂದ ಕಪ್ಪುಪಟ್ಟಿಗೆ ಸೇರಿಸಿದೆ ಮತ್ತು ತನಿಖಾ ಸಂಸ್ಥೆಗಳಿಗೆ ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದೆ.