ಜಿಪಂ, ತಾಪಂ ಚುನಾವಣೆ ವಿಳಂಬ: ಸರ್ಕಾರಕ್ಕೆ ದಂಡ ವಿಧಿಸಿದ ಉಚ್ಚ ನ್ಯಾಯಾಲಯ

ಬೆಂಗಳೂರು (ಡಿ.15): ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಪದೇ ಪದೇ ಕಾಲಾವಕಾಶ ಕೋರುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿ 5 ಲಕ್ಷ ರು. ದಂಡ ವಿಧಿಸಿದೆ. ಅರ್ಜಿ ಸಲ್ಲಿಕೆಯಾಗಿ 1 ವರ್ಷ ಕಳೆದಿದ್ದು, ಈವರೆಗೆ 3ನೇ ಬಾರಿ ಕಾಲಾವಕಾಶ ಕೋರಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ ಆದೇಶಗಳನ್ನು ಪಾಲಿಸಬೇಕು ಎಂಬ ಉದ್ದೇಶವಿಲ್ಲ. ನಮ್ಮ ಆದೇಶಗಳೆಂದರೆ ಅಲಂಕಾರಿಕ ಪೇಪರ್‌ಗಳೆಂದು ಸರ್ಕಾರ ಭಾವಿಸಿ ಹಲವಾರು ಬಾರಿ ಕಾಲಾವಕಾಶ ಕೋರುತ್ತಿದೆ ಎಂದು ನ್ಯಾಯಪೀಠ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ರಾಜ್ಯದಲ್ಲಿ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್‌ ಪಡೆದು, ‘ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ’ ರಚಿಸಲು ಸರ್ಕಾರವು ಕರ್ನಾಟಕ ಪಂಚಾಯತ್‌ ರಾಜ್‌ ಮತ್ತು ಗ್ರಾಮ ಸ್ವರಾಜ್‌ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸುತ್ತಿದ್ದ ಮುಖ್ಯನ್ಯಾಯಮೂರ್ತಿ ಪಿ.ಬಿ.ವರಾಲೆ ಅವರಿದ್ದ ವಿಭಾಗೀಯ ಪೀಠದ ಮುಂದೆ, ಸರ್ಕಾರದ ಪರ ವಕೀಲರು ಹಾಜರಾಗಿ ಮತ್ತೆ 12 ವಾರ ಕಾಲಾವಕಾಶ ಕೇಳಿದರು. ಆದರೆ ಸರ್ಕಾರದ ಈ ನಡೆಗೆ ನ್ಯಾಯಪೀಠ ಅತೃಪ್ತಿ ವ್ಯಕ್ತಪಡಿಸಿತು.

ಬಿಬಿಎಂಪಿ ಚುನಾವಣೆ: ವಿಚಾರಣೆ ಮುಂದೂಡಿಕೆ

‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆಸಲು ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಏತನ್ಮಧ್ಯೆ ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವು ಕಾಲಾವಕಾಶ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದೆ. ಈ ಅರ್ಜಿ ಇದೇ 15 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ನಿರೀಕ್ಷೆ ಇದೆ’ ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೀಠ ಬುಧವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ನ್ಯಾಯಪೀಠಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ 2023ರ ಜನವರಿ 9ಕ್ಕೆ ವಿಚಾರಣೆ ಮುಂದೂಡಿತು.

– ಪಿ.ಬಿ.ವರಾಳೆ, ಮುಖ್ಯ ನ್ಯಾಯಮೂರ್ತಿ

Share & Spread
error: Content is protected !!