ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ವಿದ್ಯಾರ್ಥಿನಿಯರು ಪಾಠ ಕಲಿಸುವ ಶಿಕ್ಷಕನ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿಯರ ಬಳಿ ಬಾಲ ಬಿಚ್ಚಿದ ಶಿಕ್ಷನಿಗೆ ಚಳಿ ಬಿಡಿಸಲು ಕೈಯಲ್ಲಿ ಕೋಲು, ದೊಣ್ಣೆ ಹಿಡಿದು ವಿದ್ಯಾರ್ಥಿನಿಯರು ಉಗ್ರವತಾರ ತಾಳಿದ್ದಾರೆ. ವಿದ್ಯಾರ್ಥಿನಿಯರ ಏಟಿಗೆ ಮುಖ್ಯ ಶಿಕ್ಷಕ ಬೆಳಲಿ ಬೆಂಡಾಗಿದ್ದಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರ ಜತೆ ಅಸಭ್ಯ ವರ್ತನೆ ತೋರಿದ ಹಿನ್ನೆಲೆ ವಿದ್ಯಾರ್ಥಿನಿಯರು ಗುಂಪಾಗಿ ಕಾಮುಕ, ಮುಖ್ಯ ಶಿಕ್ಷಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಎಣ್ಣೆ ಏಟಲ್ಲಿ ರಾತ್ರಿ ವಿದ್ಯಾರ್ಥಿನಿಯರ ಜತೆ ಶಿಕ್ಷಕ ಆನಂದ ಚಿನ್ಮಯ ಮೂರ್ತಿ ಅಸಭ್ಯವರ್ತನೆ ತೋರಿದ್ದ. ಇದರಿಂದ ತಕ್ಷಣವೇ ಎಚ್ಚೆತ್ತ ವಿದ್ಯಾರ್ಥಿನಿಯರು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಪದೇ ಪದೇ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಮಂಡ್ಯ ಜಿಲ್ಲೆ ಸಾಕ್ಷಿಯಾಗುತ್ತಿದೆ. ಕೆಲ ದಿನಗಳ ಹಿಂದೆ ಮಳವಳ್ಳಿ ರೇಪ್ ಎಂಡ್ ಮರ್ಡರ್ ಪ್ರಕರಣ ನಡೆದಿತ್ತು. ಬಳಿಕ ಬೇಬಿ ಗ್ರಾಮದ ಶಿಕ್ಷಕನ ಲೈಂಗಿಕ ದೌರ್ಜನ ಪ್ರಕರಣ ಆಯ್ತು, ಈಗ ಕಟ್ಟೇರಿ ಗ್ರಾಮದ ಸರದಿ. ಕತ್ತಲಿಂದ ಬೆಳಕಿನಡೆಗೆ ದಾರಿ ತೋರಿಸಬೇಕಿದ್ದ ಗುರುವಿನ ಸ್ಥಾನಕ್ಕೆ ಈ ಕಾಮ ಕ್ರಿಮಿಗಳು ಧಕ್ಕೆ ತರುತ್ತಿದ್ದಾರೆ. ಸದ್ಯ ಕೆ.ಆರ್.ಎಸ್ ಠಾಣಾ ಪೊಲೀಸರು ಕಾಮುಕ ಶಿಕ್ಷಕನನ್ನ ವಶಕ್ಕೆ ಪಡೆದಿದ್ದಾರೆ.