ಬೆಂಗಳೂರು: ಕೈ ಇಟ್ಟಲೆಲ್ಲಾ ಕಂತೆ ಕಂತೆ ನೋಟು, ಕಂಡಲ್ಲೆಲ್ಲಾ ಕೆಜಿಗಟ್ಟಲೆ ಚಿನ್ನಾಭರಣಗಳು…ಇದು ಶುಕ್ರವಾರ ಬೆಳ್ಳಂಬೆಳಗ್ಗೆ ರಾಜ್ಯದ 21 ಸರ್ಕಾರಿ ಅಧಿಕಾರಿಗಳ ನಿವಾಸ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಕಂಡುಬಂದ ದೃಶ್ಯ. ವಿವಿಧ ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಗಳಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ಚ್ ವಾರಂಟ್ ಪಡೆದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಸರ್ಕಾರಿ ಅಧಿಕಾರಿಗಳ ಆದಾಯ ಗಳಿಕೆ ಕಂಡು ನಿಜಕ್ಕೂ ಹೌಹಾರುವಂತೆ ಮಾಡಿದೆ.
The Anti-Corruption Bureau sleuths are conducting a search and seizure operations at 80 locations belonging to 21 state government officials, who have allegedly amassed wealth disproportionate to their known sources of income @XpressBengaluru @praveen3537 @seemantsingh96 pic.twitter.com/4Hx8NUs1LE
— MG Chetan (@mg_chetan) June 17, 2022
ಬಾಗಲಕೋಟೆಯ ಆರ್ ಟಿಒ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆ ಮೇಲೆ ಎಸಿಬಿ ದಾಳಿಯಾಗಿದ್ದು ಧಾರವಾಡದ ಲಕಮನಹಳ್ಳಿ ಕೆಎಚ್ ಬಿ ಕಾಲೊನಿ ಮನೆಯಲ್ಲಿ 3 ಚಿನ್ನದ ನಾಣ್ಯ, 2 ಬೆಳ್ಳಿ ನಾಣ್ಯ ಸೇರಿದಂತೆ ಒಟ್ಟು 16 ಲಕ್ಷ ರೂಪಾಯಿ ಹಣ, ಬಂಗಾರದ ಡಾಬು, 250 ಗ್ರಾಂ ಬಂಗಾರ, 400 ಗ್ರಾಂ ಬೆಳ್ಳಿ ಪತ್ತೆಯಾಗಿದೆ. ಇನ್ನು ಮನೆಯಲ್ಲಿ ಪತ್ತೆಯಾದ ನಗದು ತುಂಬಿಕೊಂಡು ಹೋಗಲು ಎಸಿಬಿ ಅಧಿಕಾರಿಗಳು ಕಬ್ಬಿಣದ ಟ್ರಂಕ್ ತರಬೇಕಾಯಿತು.
ಬಾಗಲಕೋಟೆ ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರ ಗೋಗಿ ನಿವಾಸದಲ್ಲಿ 1 ಲಕ್ಷ 15 ಸಾವಿರ ರೂಪಾಯಿ ನಗದು ಪತ್ತೆಯಾಗಿದೆ. ಬಂಗಾರದ ಒಡವೆ, ಚಿನ್ನದ ಸರ, ಬೆಳ್ಳಿ ಗಣಪತಿ, ಬೆಳ್ಳಿ ಚೆಂಬು, ಲೋಟ, ನಗದು ಪತ್ತೆಯಾಗಿದೆ. ಮಗನ ಹೆಸರಿನಲ್ಲಿ 8 ಲಕ್ಷದ 90 ಸಾವಿರ ರೂಪಾಯಿ ಬ್ಯಾಂಕ್ ಠೇವಣಿ ಇರಿಸಿದ್ದಾರೆ.
ಇನ್ನು ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಹರೀಶ್ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಕಂತೆ ಕಂತೆ ಹಣ ಪತ್ತೆಯಾಗಿದೆ.
ಬೆಳಗಾವಿಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಮನೆ ಮೇಲೆ ದಾಳಿ ನಡೆದಿದ್ದು ಈ ವೇಳೆ ಅವರ ನಿವಾಸದಲ್ಲಿ ದಾಖಲೆ ಪತ್ತೆಯಾಗಿವೆ. ಲೋಕೋಪಯೋಗಿ ಇಲಾಖೆ ಅಧೀಕ್ಷಕ ಬಿ ವೈ ಪವಾರ್ ರನ್ನು ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.
ದಾಳಿಗೊಳಗಾದ 21 ಸರ್ಕಾರಿ ಅಧಿಕಾರಿಗಳು: 1. ಭೀಮಾ ರಾವ್ ವೈ ಪವಾರ್, ಬೆಳಗಾವಿಯ ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್,
2. ಉಡುಪಿಯ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಹರೀಶ್
3. ಹಾಸನದ ಸಣ್ಣ ನೀರಾವರಿ ಇಲಾಖೆ ಎಇಇ ರಾಮಕೃಷ್ಣ ಎಚ್ ವಿ.
4. ಕಾರವಾರದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ರಾಜೀವ್ ಪುರಸಯ್ಯ ನಾಯಕ್
5. ಪೊನ್ನಂಪೇಟೆಯ ಜಿಲ್ಲಾ ಪಂಚಾಯತ್ ಜೂನಿಯರ್ ಎಂಜಿನಿಯರ್ ಬಿ ಆರ್ ಬೋಪಯ್ಯ
6. ಬೆಳಗಾವಿಯ ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ಮಧುಸೂದನ್
7. ಹೂವಿನಹಡಗಲಿಯ ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಪರಮೇಶ್ವರಪ್ಪ
8. ಬಾಗಲಕೋಟೆಯ ಆರ್ ಟಿಒ ಯಲ್ಲಪ್ಪ ಎನ್ ಪಡಸಾಲಿ
9 ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಪ್ಪ ನಾಗಪ್ಪ ಗೋಗಿ
10. ಗದಗದ ಆರ್ ಡಿಪಿಆರ್ ನ ಪ್ರದೀಪ್ ಎಸ್ ಆಲೂರ್
11. ಬೆಂಗಳೂರಿನ ಉಪ ಮುಖ್ಯ ವಿದ್ಯುತ್ ಅಧಿಕಾರಿ ಸಿದ್ದಪ್ಪ ಟಿ.
12. ಬೀದರ್ ನ ಪಶುವೈದ್ಯ ಇಲಾಖೆಯ ಸಹಾಯಕ ನಿಯಂತ್ರಣಾಧಿಕಾರಿ ಮುರುತುಂಜಯ ಚೆನ್ನಬಸಯ್ಯ ತಿರಾಣಿ.
13. ಬೀದರ್ ನ ಜಿಲ್ಲಾ ಕಾರ್ಯಕ್ರಮಾಧಿಕಾರಿ ತಿಪ್ಪಣ್ಣ ಪಿ ಸಿರಸಗಿ
14. ಚಿಕ್ಕಬಳ್ಳಾಪುರದ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ್ ಕುಮಾರ್
15. ಕಾರವಾರದ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್
16. ಲೋಕೋಪಯೋಗಿ ಇಲಾಖೆಯ ಮಂಜುನಾಥ್ ಜಿ
17. ಬಿಡಿಎಯ ಸಿ ಗ್ರೂಪ್ ನ ಶಿವಲಿಂಗಯ್ಯ
18. ಕೊಪ್ಪಳದ ಪೊಲೀಸ್ ಇನ್ಸ್ ಪೆಕ್ಟರ್ ಉದಯ ರವಿ
19. ಕಡೂರು ಪುರಸಭೆಯ ಬಿ ಜಿ ತಿಮ್ಮಯ್ಯ
20. ರಾಣೆಬೆನ್ನೂರಿನ ಯುಟಿಪಿ ಕಚೇರಿಯ ಚಂದ್ರಪ್ಪ ಸಿ ಹೋಳೇಕರ್
21. ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನದ ಅಧಿಕಾರಿ ಜನಾರ್ದನ್ ಅವರ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಗಳಿಕೆಯನ್ನು ಬಯಲು ಮಾಡಿದ್ದಾರೆ.