ಸಬ್ – ಅರ್ಬನ್ ರೈಲು ಸೇರಿದಂತೆ ರೂ. 50,000 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಇಂದು ಚಾಲನೆ

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಇಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 15,000 ಕೋಟಿ ರೂ.ಗಳ ಮಹತ್ವಾಕಾಂಕ್ಷೆಯ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿಗೆ ಚಾಲನೆ ನೀಡಲಿದ್ದಾರೆ.

ಇದು ಬೆಂಗಳೂರಿನ ಜನತೆಗೆ ಪ್ರಧಾನಿ ನೀಡುತ್ತಿರುವ ದೊಡ್ಡ ಕೊಡುಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.  ಒಟ್ಟಾರೆ 50,000 ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.  ಮಂಗಳವಾರ ಮೈಸೂರಿನಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ.

ರೈಲು, ಮೂಲಭೂತ ಯೋಜನೆಗಳಿಗೆ ಪ್ರಧಾನಿ ಚಾಲನೆ: ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಯಲಹಂಕದ ವಾಯುನೆಲೆಗೆ ಬಂದಿಳಿಯುವ ಮೋದಿ, ಹೆಲಿಕಾಪ್ಟರ್ ಮೂಲಕ ಭಾರತೀಯ ವಿಜ್ಞಾನ ಸಂಸ್ಥೆಗೆ ತೆರಳಲಿದ್ದಾರೆ. ಅಲ್ಲಿ ಅವರು ಸೆಂಟರ್ ಫಾರ್ ಬ್ರೈನ್ ರಿಸರ್ಚ್ (ಸಿಬಿಆರ್) ಉದ್ಘಾಟಿಸಲಿದ್ದಾರೆ ಮತ್ತು ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಧ್ಯಾಹ್ನ 1.25ಕ್ಕೆ ಕೊಮ್ಮಘಟ್ಟದಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಸಭೆಯಲ್ಲಿ ದಾಬಸ್ ಪೇಟೆಯಿಂದ ಹೊಸಕೋಟೆವರೆಗಿನ ಬಹುಕೋಟಿ ವೆಚ್ಚದ ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ ಹಾಗೂ 27,000 ಕೋಟಿ ರೂ.ಗೂ ಅಧಿಕ ಮೊತ್ತದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು 50, 000 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಕಂಟೋನ್ಮೆಂಟ್ ಮತ್ತು ಯಶವಂತಪುರ ರೈಲು ನಿಲ್ದಾಣಗಳ ಪುನರಾಭಿವೃದ್ಧಿ, ಬಹು ರಸ್ತೆಗಳ ಉನ್ನತೀಕರಣ ಯೋಜನೆಗಳು ಮತ್ತು ಬೆಂಗಳೂರಿನ ಮಲ್ಟಿಮೋಡಲ್ ಲಾಜಿಸ್ಟಿಕ್ ಪಾರ್ಕ್ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ.ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಲಾಗಿರುವ ದೇಶದ ಮೊದಲ ಹವಾನಿಯಂತ್ರಿತ ನಿಲ್ದಾಣವಾದ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ, ಕೊಂಕಣ ರೈಲ್ವೆ ಮಾರ್ಗದ ಸಂಪೂರ್ಣ ವಿದ್ಯುದ್ದೀಕರಣ ಮತ್ತು ಇತರ ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ನಂತರ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್)ನ ನೂತನ ಕ್ಯಾಂಪಸ್ ಉದ್ಘಾಟನೆ ಹಾಗೂ ಡಾ.ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಮೇಲ್ದರ್ಜೇಗೇರಿಸಲಾಗಿರುವ ಐಟಿಐನ 150 ‘ತಂತ್ರಜ್ಞಾನ ಕೇಂದ್ರ’ಗಳನ್ನು ಅವರು ದೇಶಕ್ಕೆ ಅರ್ಪಿಸಲಿದ್ದಾರೆ.

Share & Spread
error: Content is protected !!