ಅಗ್ನಿಪಥ್: 4 ವರ್ಷ ಅಗ್ನಿವೀರ ಸೇವೆ ಸಲ್ಲಿಸಿದವರಿಗೆ ಪೊಲೀಸ್ ಇಲಾಖೆ ಹುದ್ದೆಯ ಅವಕಾಶ; ಉ.ಪ್ರದೇಶ ಸೇರಿ ಹಲವು ರಾಜ್ಯಗಳ ಚಿಂತನೆ!

ನವದೆಹಲಿ: ಕೇಂದ್ರ ಸರ್ಕಾರದ ಉದ್ದೇಶಿತ ಅಗ್ನಿಪಥ ಯೋಜನೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಯೋಜನೆಯಡಿಯಲ್ಲಿ  4 ವರ್ಷ ಅಗ್ನಿವೀರ ಸೇವೆ ಸಲ್ಲಿಸಿದವರಿಗೆ ಪೊಲೀಸ್ ಇಲಾಖೆ ಹುದ್ದೆಯ ಅವಕಾಶ ನೀಡುವ ಕುರಿತು ವಿವಿಧ ರಾಜ್ಯ ಸರ್ಕಾರಗಳು ಚಿಂತನೆಯಲ್ಲಿ ತೊಡಗಿವೆ.

ಇದಕ್ಕೆ ಇಂಬು ನೀಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಈ ಕುರಿತು ಸರಣಿ ಟ್ವೀಟ್ ಮಾಡಿದ್ದು, ‘ಗೌರವಾನ್ವಿತ ಪ್ರಧಾನಮಂತ್ರಿಗಳ ಆಶಯದಂತೆ, ‘ಅಗ್ನಿಪಥ್ ಯೋಜನೆ’ ಯುವಕರನ್ನು ರಾಷ್ಟ್ರ ಮತ್ತು ಸಮಾಜದ ಸೇವೆಗೆ ಸಿದ್ಧಪಡಿಸುತ್ತದೆ, ಅವರಿಗೆ ಹೆಮ್ಮೆಯ ಭವಿಷ್ಯದ ಅವಕಾಶವನ್ನು ನೀಡುತ್ತದೆ. ಉತ್ತರ ಪ್ರದೇಶ ಪೋಲೀಸ್ ಮತ್ತು ಮಿತ್ರ ಪಡೆಗಳಲ್ಲಿ ಪೋಸ್ಟ್ ಸರ್ವಿಸ್ ಹೊಂದಾಣಿಕೆಯಲ್ಲಿ ‘ಅಗ್ನಿವೀರ್’ಗಳಿಗೆ ಆದ್ಯತೆ ನೀಡಲಾಗುವುದು ಎಂದು ಈ ಮೂಲಕ ಭರವಸೆ ನೀಡುತ್ತೇವೆ.

 

ಯುವ ಒಡನಾಡಿಗಳೇ, ‘ಅಗ್ನಿಪಥ್ ಯೋಜನೆ’ ನಿಮ್ಮ ಜೀವನಕ್ಕೆ ಹೊಸ ಆಯಾಮವನ್ನು ನೀಡುವುದರ ಜೊತೆಗೆ ಭವಿಷ್ಯಕ್ಕೆ ಚಿನ್ನದ ನೆಲೆಯನ್ನು ನೀಡುತ್ತದೆ. ಇತರರ ಮಾತು ಕೇಳಿ ಮೋಸ ಹೋಗಬೇಡಿ. ಉತ್ತರ ಪ್ರದೇಶ ಸರ್ಕಾರ ಪೊಲೀಸ್ ಮತ್ತು ಇತರ ಸೇವೆಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲೂ ಚಿಂತನೆ
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಆಧಾರದಲ್ಲಿ ಅಗ್ನಿವೀರ ಹುದ್ದೆಗೆ ಸೇರುವ ಅಭ್ಯರ್ಥಿಗಳಿಗೆ, 4 ವರ್ಷ ಸೇವೆ ಮುಗಿಸಿ ಹಿಂದಿರುಗಿದಾಗ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿಶೇಷ ಅವಕಾಶ ನೀಡುವ ಕುರಿತು ಕರ್ನಾಟಕ ಸರ್ಕಾರ ಕೂಡ ಚಿಂತನೆ ನಡೆಸಿದೆ. ಈ ವಿಶೇಷ ಅವಕಾಶ ಮುಂದಿನ ದಿನಗಳಲ್ಲಿ ಸಿಗುವ ಸಾಧ್ಯತೆಗಳು ಶೇಕಡ.99 ರಷ್ಟು ಹೆಚ್ಚಿದೆ. ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ಹಲವು ರಾಜ್ಯ ಸರ್ಕಾರಗಳು ಈ ಬಗ್ಗೆ ಚಿಂತಿಸಿವೆ. ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ಬಗ್ಗೆ ಘೋಷಣೆಯನ್ನೂ ಮಾಡಿದ್ದು, ಪೊಲೀಸ್ ಇಲಾಖೆಯಲ್ಲಿ ಅಗ್ನಿವೀರರಿಗೆ ಯಾವ ರೀತಿ ಅವಕಾಶ ನೀಡಬಹುದು ಎಂಬ ಬಗ್ಗೆ ಇಲಾಖಾ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಕೇಂದ್ರ ಸರ್ಕಾರ ಮಂಗಳವಾರವಷ್ಟೇ ಅಗ್ನಿಪಥ ಯೋಜನೆಯನ್ನು ಪ್ರಕಟಿಸಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದ ಹಾಗೂ ಹದಿನೇಳೂವರೆ ವರ್ಷದಿಂದ 21 ವರ್ಷ ಮೀರದ ಅಭ್ಯರ್ಥಿಗಳಿಗೆ ಸೇನೆಗೆ ಸೇರಲು ಅವಕಾಶ ನೀಡುವುದಾಗಿ ಘೋಷಿಸಿದೆ. ಈ ಹುದ್ದೆಗೆ ಅಗ್ನಿವೀರರಾಗಿ ಹೆಸರು ನೀಡಿದ್ದು, 4 ವರ್ಷ ಸೇವೆಯ ಅವಧಿ ಇರುತ್ತದೆ. ಈ ಅವಧಿಯಲ್ಲಿ ಮೊದಲ ವರ್ಷದಿಂದ 30 ಸಾವಿರ ವೇತನ, ನಾಲ್ಕನೇ ವರ್ಷ 40 ಸಾವಿರ ವೇತನ ನೀಡಲಿದ್ದು, ವಿಶೇಷ ಭತ್ಯೆಗಳು, ಪರಿಹಾರಗಳ ಪ್ಯಾಕೇಜ್‌ ಅನ್ನು ಘೋಷಣೆ ಮಾಡಿದೆ.

Share & Spread
error: Content is protected !!