ಬೆಂಗಳೂರು: ನಗರದ ನೃಪತುಂಬ ರಸ್ತೆಯ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ನಾಲ್ವರು ಕಾರ್ಮಿಕರ ಪೈಕಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆಂದು ಬುಧವಾರ ತಿಳಿದುಬಂದಿದೆ.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬಸವರಾಜ್ (23) ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡಿರುವ ಮೊಯೀವುದ್ದೀನ್, ಚಾಂದ್ ಪಾಷಾ ಹಾಗೂ ರಫೀಸಾಬ್ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೇಲ್ಚಾವಣಿಯಲ್ಲಿ ನೀರು ಸೋರಿಕೆ ತಡೆ ಕಾಮಗಾರಿಯಲ್ಲಿ ಕಾರಾಮಿಕರು ನಿರತರಾಗಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಮುಂದೆ 20 ಅಡಿ ಅಗಲ ಹಾಗೂ 30 ಅಡಿ ಎತ್ತರದ ಮೇಲ್ಛಾವಣಿಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಮಿಸುತ್ತಿದ್ದು, ಎರಡು ತಿಂಗಳಿಂದ ಇಲ್ಲಿ ಐವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ಬಂದ ನಾಲ್ವರು ಕಾರ್ಮಿಕರು ನೆಲದಿಂದ ಸಿಮೆಂಟ್ ಮೂಟೆಗಳನ್ನು ಛಾವಣಿಗೆ ಸಾಗಿಸುತ್ತಿದ್ದರು. ಮತ್ತೊಬ್ಬ ಕೆಲಸಗಾರ ರಾಜಾ ಭಕ್ಷ ಕೆಳಗೆ ನಿಂತಿದ್ದ. ಈ ವೇಳೆ ಏಕಾಏಕಿ ಛಾವಣಿ ಕುಸಿದು ಬಿದ್ದಿದೆ. ಕೂಡಲೇ ಸಾರ್ವಜನಿಕರು, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಗೆ ಧಾವಿಸಿದ್ದಾರೆ.
ಅಷ್ಟರಲ್ಲಿ ಮಾಹಿತಿ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬಂದು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಜೆಸಿಬಿ ಬಳಸಿ ಮಣ್ಣು ಸರಿಸಿ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಬಳಿಕ ಗಾಯಗೊಂಡಿದ್ದ ಕಾರ್ಮಿಕರನ್ನು ಅದೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಬಸವರಾಜ ಕೊನೆಯುಸಿರೆಳೆದಿದ್ದಾನೆ. ಇನ್ನುಳಿದ ಮೂವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯಗೊಂಡಿದ್ದ ನಾಲ್ವರ ಪೈಕಿ ಓರ್ವ ಕಾರ್ಮಿಕ ಬಸವರಾಜ್ ಎಂಬುವವರು ನಿನ್ನೆ ಮಧ್ಯಾಹ್ನ 1.55ರ ಸುಮಾರಿಗೆ ಮೃತಪಟ್ಟಿದ್ದಾರೆ. ಇತರರಿಗೆ ಚಿಕಿತ್ಸೆ ಮುಂದುವರೆದಿದೆ. ಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಯೇ ಭರಿಸಲಿದೆ ಎಂದು ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆಂಟೊ ಡಿಯೋಲ್ ಅವರು ಹೇಳಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಬೆಳಿಗ್ಗೆ 6.31ರ ಸುಮಾರಿಗೆ ದೂರವಾಣಿ ಕರೆ ಬಂದಿತ್ತು. ಈ ವೇಳೆ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿ, ನಾಲ್ವರನ್ನೂ ರಕ್ಷಣೆ ಮಾಡಲಾಗಿತ್ತು. ನಾಲ್ವರ ಪೈಕಿ ಓರ್ವ ಪ್ರಜ್ಞಾಹೀನನಾಗಿದ್ದ. ಆತನ ಸ್ಥಿತಿ ಗಂಭೀರವಾಗಿತ್ತು ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ಆರ್.ಮಹೇಶ್ ಅವರು ಮಾಹಿತಿ ನೀಡಿದ್ದಾರೆ.
ಕೂಲಿ ಕಾರ್ಮಿಕರ ಕುಟುಂಬಸ್ಥರು ಮಡಿವಾಳದ ಖಾಸಗಿ ಆಸ್ಪತ್ರೆ ಬಳಿ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಾಗಿದ್ದು, ಘಟನೆಯ ಬಗ್ಗೆ ರಾಜಾ ಸಾಬ್ ಮಾಹಿತಿ ನೀಡಿದ್ದರು. ಬೆಳಿಗ್ಗೆ 6.30 ರ ಸುಮಾರಿಗೆ ನಮಗೆ ಕರೆ ಬಂದಿತ್ತು. ನನ್ನ ಪತಿ ಮತ್ತು ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿಸಲಾಯಿತು. ನಾವು ಆಸ್ಪತ್ರೆಗೆ ಧಾವಿಸಿದೆವು. ನನ್ನ ಪತಿ ಜಲನಿರೋಧಕ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದು, ದಿನಕ್ಕೆ 500 ರೂ. ನೀಡುತ್ತಿದ್ದರು ಎಂದು ಗಾಯಗೊಂಡಿರುವ ಪಾಷಾ ಅವರ ಪತ್ನಿ ಉಮ್ನಾಬಿ ಅವರು ಹೇಳಿದ್ದಾರೆ.
ಘಟನೆ ಸಂಬಂಧ ಗುತ್ತಿಗೆದಾರ ಹಾಗೂ ಎಂಜಿನಿಯರ್ ವಿರುದ್ಧ ನಿರ್ಲಕ್ಷ್ಯತನ ಆರೋಪದಡಿ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬದುಕುಳಿದಿರುವ ಮೂವರ ಪೈಕಿ ಓರ್ವ ಕಾರ್ಮಿಕನ ಹೇಳಿಕೆಯನ್ನು ಆಧರಿಸಿ ಐಪಿಸಿ ಸೆಕ್ಷನ್ 337 ಮತ್ತು 338 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಧ್ಯಾಹ್ನದ ವೇಳೆಗೆ ಓರ್ವ ಕಾರ್ಮಿಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸೆಕ್ಷನ್ 304ಎ ನ್ನು ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಯಾರನ್ನೂ ಬಂಧನಕ್ಕೊಳಪಡಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.