ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ಪ್ರಸಾದವಾಗಿ ಪ್ಯಾಕ್ ಮಾಡಿದ ತೆಂಗಿನಕಾಯಿ ನೀರು ನೀಡಲು ಸಿದ್ಧತೆ

ಮೈಸೂರು: ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನದ ಭಕ್ತರು ದೇವರಿಗೆ ಅರ್ಪಿಸುವ ತೆಂಗಿನಕಾಯಿಯ ನೀರನ್ನು ಪ್ರಸಾದವಾಗಿ ಪಡೆಯಲಿದ್ದಾರೆ.

ದೇವಾಲಯದ ಆವರಣದಲ್ಲಿ ತೆಂಗಿನ ನೀರು ಸಂಗ್ರಹಣೆ, ಶುದ್ಧೀಕರಣ ಮತ್ತು ಪ್ಯಾಕೇಜಿಂಗ್ ಘಟಕವನ್ನು ಸ್ಥಾಪಿಸಲು ಚಾಮುಂಡೇಶ್ವರಿ ದೇವಾಲಯದ ಅಧಿಕಾರಿಗಳು ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ – ತಂಜಾವೂರು(NIFTEM – T) ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಈ ತೆಂಗಿನ ನೀರಿನ ಘಟಕವು, ಕೈಯಿಂದ ತೆಂಗಿನಕಾಯಿ ಒಡೆಯುವ, ನಿರಂತರ ಫಿಲ್ಟರ್ ಮಾಡುವ ಮತ್ತು ನಾನ್-ಥರ್ಮಲ್ UV -C ಕ್ರಿಮಿನಾಶಕ ವ್ಯವಸ್ಥೆ, ಬೃಹತ್ ಚಿಲ್ಲಿಂಗ್ ಟ್ಯಾಂಕ್‌ಗಳು ಮತ್ತು ಸ್ವಯಂಚಾಲಿತವಾಗಿ ಕಪ್ ಗೆ ನೀರು ತುಂಬುವ ಘಟಕವನ್ನು ಹೊಂದಿರುವ ಸಾಧನವಾಗಿದೆ.

ಮುಜರಾಯಿ ಇಲಾಖೆಯ ಅತಿ ಹೆಚ್ಚು ಆದಾಯವನ್ನು ಗಳಿಸುವ ದೇವಾಲಯಗಳಲ್ಲಿ ಚಾಮುಂಡೇಶ್ವರಿ ದೇವಾಲಯವು ಒಂದಾಗಿದೆ. ಈ ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಹೆಚ್ಚಿನ ಭಕ್ತರು ದೇವಾಲಯದ ಹೊರಗೆ ನಿಗದಿತ ಸ್ಥಳದಲ್ಲಿ ತೆಂಗಿನಕಾಯಿಯನ್ನು ಒಡೆಯುವುದರಿಂದ ತಾಜಾ ತೆಂಗಿನಕಾಯಿ ನೀರು ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸಲು ದೇವಸ್ಥಾನದ ಆವರಣದಲ್ಲಿ ತೆಂಗಿನ ನೀರಿನ ಘಟಕವನ್ನು ಸ್ಥಾಪಿಸಲು ದೇವಾಲಯದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ತೆಂಗಿನಕಾಯಿ ನೀರಿನ ಘಟಕ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು NIFTEM – T ವಿಜ್ಞಾನಿ ಆನಂದ್ ಎಂ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

“ನಾವು ಈಗಾಗಲೇ ತಂಜಾವೂರಿನ ಪುನ್ನೈನಲ್ಲೂರು ಮಾರಿಯಮ್ಮನ್ ದೇವಸ್ಥಾನದಲ್ಲಿ ಈ ಘಟಕವನ್ನು ಸ್ಥಾಪಿಸಿದ್ದೇವೆ. ಘಟಕದ ವೆಚ್ಚ ಸುಮಾರು 7 ಲಕ್ಷ ರೂ. ಆಗುತ್ತದೆ. ಶುದ್ಧೀಕರಿಸಿದ ನೀರನ್ನು ಬಟ್ಟಲುಗಳಲ್ಲಿ ತುಂಬಿ ಪ್ಯಾಕ್ ಮಾಡಿ ಭಕ್ತರಿಗೆ ಪ್ರಸಾದವಾಗಿ ವಿತರಿಸಬಹುದು. ಈ ತಂತ್ರಜ್ಞಾನದಿಂದ ತೆಂಗಿನಕಾಯಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳಬಹುದು ಮತ್ತು ಅದನ್ನು ಭಕ್ತರಿಗೆ ಪ್ರಸಾದವಾಗಿ ನೀಡಬಹುದು” ಎಂದು ಆನಂದ್ ಹೇಳಿದ್ದಾರೆ.

Share & Spread
error: Content is protected !!