ಲಖನೌ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ಪೂಜೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ ವಾರಣಾಸಿ ಜಿಲ್ಲಾ ನ್ಯಾಯಾಲಯ ಮಂಗಳವಾರಕ್ಕೆ ತೀರ್ಪು ಕಾಯ್ದರಿಸಿದೆ.
ಮಸೀದಿಯ ಅಡ್ವೊಕೇಟ್ ಕಮಿಷನರ್ ಸಮೀಕ್ಷಾ ವರದಿಯನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ಆಕ್ಷೇಪಣೆಗಳನ್ನು ಆಹ್ವಾನಿಸಬೇಕೆ ಅಥವಾ ಬೇಡವೇ ಎಂಬುದನ್ನು ಸಹ ನ್ಯಾಯಾಲಯ ನಾಳೆ ನಿರ್ಧರಿಸಲಿದೆ.
ಪ್ರಕರಣದ ವಿಚಾರಣೆ ವೇಳೆ 19 ವಕೀಲರು ಮತ್ತು ನಾಲ್ವರು ಅರ್ಜಿದಾರರು ಸೇರಿದಂತೆ 23 ಜನರಿಗೆ ಮಾತ್ರವೇ ನ್ಯಾಯಾಲಯದ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಸದ್ಯ ಇಂದಿಗೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಕೋರ್ಟ್ ನಾಳೆಗೆ ಆದೇಶ ಕಾಯ್ದಿರಿಸಿದೆ.
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಪ್ರಕರಣವನ್ನು ಕೆಳ ನ್ಯಾಯಾಲಯಕ್ಕೆ ವರ್ಗಾಯಿಸಿ, ಇದು ತುಂಬಾ ಸೂಕ್ಷ್ಮ ಪ್ರಕರಣ. ಹೀಗಾಗಿ ಹಿರಿಯ ಮತ್ತು ಅನುಭವಿಗಳ ಅಗತ್ಯವಿದೆ ಎಂದು ಹೇಳಿತ್ತು. ಇದಾದ ಕೆಲ ದಿನಗಳ ಬಳಿಕ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿತ್ತು. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ್, ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದರು.
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆಯ ಸಮಯದಲ್ಲಿ ಕಂಡುಬಂದಿದೆ ಎಂದು ಹೇಳಲಾದ ಶಿವಲಿಂಗವನ್ನು ಪೂಜಿಸಲು ಅನುಮತಿ ಕೋರಿ ಹೊಸ ಅರ್ಜಿಯೂ ಸಲ್ಲಿಸಲಾಗಿತ್ತು. ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಹಿಂದೂ ಪರರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ ಸಂಘಟನೆಯು, ಶಿವಲಿಂಗ ಪತ್ತೆಯಾದ ಜಾಗವನ್ನು ನಿರ್ಬಂಧಿಸಿದ್ದರ ವಿರುದ್ಧ ಅರ್ಜಿ ಸಲ್ಲಿಸಿತ್ತು.