ಹುಬ್ಬಳ್ಳಿ: ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿಯವರು ಸ್ಪರ್ಧಿಸಲಿದ್ದಾರೆ. ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಗೆ ದಿನಾಂಕ ಘೋಷಣೆ ಬಳಿಕ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.
ಮಾಧ್ತಮಿಕ ಶಿಕ್ಷಕರ ಸಂಘವು ಇಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಆಯೋಜಿಸಿದ್ದ ಬಸವರಾಜಪಥ ಕಿರು ಹೊತ್ತಿಗೆ ಬಿಡುಗಡೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ, ಯಡಿಯೂರಪ್ಪ ಅವರೂ ಒಪ್ಪಿದ್ದಾರೆ. ವಿಶೇಷವಾಗಿ ನಮ್ಮ ಎಚ್.ಡಿ. ಕುಮಾರಸ್ವಾಮಿ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಪರಿಷತ್ ಗೆ ಮತ್ತೆ ನೀವು ಬರಲೇಬೇಕು. ನಿಮ್ಮ ನಿರ್ಧಾರಕ್ಕೆ ಸಹಮತವಿದೆ ಎಂದಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಸೆರ್ಪಡೆಗೆ ಆ ಪಕ್ಷದ ಕೆಲವರಿಂದ ವಿರೋಧವಿದೆಯಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಹೊರಟ್ಟಿ, ‘ಯಾರು ವಿರೋಧ ಮಾಡುತ್ತಿದ್ದಾರೆ ಅದು ನನಗೆ ಬೇಕಾಗಿಲ್ಲ. ಶನಿವಾರ ಯಡಿಯೂರಪ್ಪ ಅವರು ನನ್ನೊಂದಿಗೆ ಮಾತನಾಡಿದ್ದಾರೆ’ ಎಂದರು. ಬಿಜೆಪಿ ಸೇರ್ಪಡೆಗೆ ಕರ್ನಾಟಕದ ಎಲ್ಲಾ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.