ಮೈಸೂರು: ದೇಶದಲ್ಲಿ ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಿಟ್ಟ 1 ಲಕ್ಷ ಕೋಟಿ ರೂ.ಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಯೋಜನೆಗಳ ಸಿದ್ಧಪಡಿಸುವಲ್ಲಿ, ಕೋಲ್ಡ್ ಸ್ಟೋರೇಜ್ ಮತ್ತು ಇತರ ಸೌಲಭ್ಯಗಳಂತಹ ಮೂಲಭೂತ ಸೌಕರ್ಯಗಳ ಪಟ್ಟಿ ಮತ್ತು ಅಂತಹ ಘಟಕಗಳನ್ನು ಸ್ಥಾಪಿಸಲು ಹಣವನ್ನು ಬಳಕೆ ಮಾಡುವಲ್ಲಿ ಮತ್ತು ಸಬ್ಸಿಡಿ ಬಡ್ಡಿಯೊಂದಿಗೆ ಸಾಲವನ್ನು ಪಡೆಯಲು ಕೇಂದ್ರಕ್ಕೆ ಸಕಾಲದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಹೇಳಿದ್ದಾರೆ.
ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಹಾಗೂ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ‘ಒಂದು ಜಿಲ್ಲೆ-ಒಂದು ಉತ್ಪನ್ನ’ ಯೋಜನೆಯನ್ನು ಹೊರತರುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಆದರೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಕ್ಕರೆ ಮತ್ತು ರೇಷ್ಮೆ ಕೃಷಿಗೆ ಪ್ರತ್ಯೇಕ ಸಚಿವಾಲಯಗಳನ್ನು ಹೊಂದಿರುವ ರಾಜ್ಯಗಳು ವಿಳಂಬ ಮಾಡುತ್ತಿವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳನ್ನು ಒಂದೇ ಸಚಿವಾಲಯದ ಅಡಿಯಲ್ಲಿ ತರಲು ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದ್ದೇನೆಂದು ತಿಳಿಸಿದ್ದಾರೆ.