ಪರಿಷ್ಕೃತ ಪಠ್ಯಪುಸ್ತಕದಲ್ಲಿ ಬಸವಣ್ಣ ಅಧ್ಯಯದಲ್ಲಿ ಸತ್ಯಗಳ ತಿರುಚಲಾಗಿದೆ: ಸಾಣೇಹಳ್ಳಿ ಮಠದ ಶ್ರೀಗಳು

ಚಿತ್ರದುರ್ಗ: 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಪರಿಷ್ಕೃತ ಪಠ್ಯದ ಬದಲು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಕುರಿತ ಹಳೆಯ ಪಾಠವನ್ನೇ ಉಳಿಸಿಕೊಳ್ಳಬೇಕು ಎಂದು ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಂಗಳವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಸವಣ್ಣನವರ ವಿಚಾರಧಾರೆಯನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ತಪ್ಪಾಗಿ ಅರ್ಥೈಸಿದ್ದು, ಕೂಡಲೇ ತಿದ್ದುಪಡಿ ಮಾಡಿರುವ ಪಠ್ಯವನ್ನು ರದ್ದುಗೊಳಿಸಬೇಕು ಎಂದು ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಬಸವಣ್ಣನವರು ಜನಿವಾರ (ಪವಿತ್ರ ದಾರ) ಧರಿಸಿ ಕೂಡಲ ಸಂಗಮಕ್ಕೆ ತೆರಳಿದ್ದರು ಎಂದು ಉಲ್ಲೇಖಿಸಲಾಗಿದೆ… ಇದು ಸಂಪೂರ್ಣ ತಪ್ಪು… ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮಧ್ಯಕಾಲದ ಕರ್ನಾಟಕದ ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾರೆ. ವೈದಿಕ ಮೂಲ ಧರ್ಮದಲ್ಲಿ ಬೇರೂರಿದ್ದ ಅಸಂಖ್ಯ ಧಾರ್ಮಿಕ ಆಚರಣಾ ವಿಧಿ ವಿಧಾನಗಳನ್ನು ಬದಿಗೊತ್ತಿ ಮಾನವೀಯ ಮೌಲ್ಯ ಆಧಾರಿತ ಸರಳ ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅವರ ಅನುಯಾಯಿಗಳಾದ ಶರಣರು ಪ್ರಚಾರಪಡಿಸಿದರು.

ಜಾತಿ ವ್ಯವಸ್ಥೆಯ ಕಡುವಿರೋಧಿಯಾಗಿದ್ದ ಬಸವೇಶ್ವರರು ತಮ್ಮ ಉಪನಯನದ ನಂತರ ಯಜ್ಞಾಪವೀತವನ್ನು ಕಿತ್ತೆಸೆದು ಕೂಡಲಸಂಗಮಕ್ಕೆ ನಡೆದರು. ಉನ್ನತಾಧಿಕಾರದಲ್ಲಿದ್ದರೂ ಹಣ, ಅಧಿಕಾರ, ಅಧಿಪತ್ಯ ಇವ್ಯಾವುದರಿಂದಲೂ ಇವರು ವಿಚಲಿತರಾಗಲಿಲ್ಲ. ತಮ್ಮ ಇಡೀ ಜೀವನವನ್ನು ಸಮಾಜ ಮತ್ತು ಧರ್ಮದಲ್ಲಿನ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಮೀಸಲಿರಿಸಿದರು. ಸಮಾಜ, ಧರ್ಮದ ಪುನಶ್ಚೇತನಕ್ಕೆ ಟೊಂಕಕಟ್ಟಿದರು. ಸ್ವಾವಲಂಬನೆಯ ತತ್ವವನ್ನು, ದೇಹವೇ ದೇಗುಲ ಈ ಬಗೆಯ ಸಂವೇದನೆಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪಗಳಾಗಿವೆ.

ಅವರು ಸರಣ ಕನ್ನಡವನ್ನು ಬಳಸುವ ಮೂಲಕ ತಮ್ಮ ಚಳವಳಿಯನ್ನು ಜನಮುಖಿಯಾಗಿಸಿದರು. ಇಂತಹ ಅನೇಕ ಮಹತ್ವದ ಅಂಶಗಳನ್ನೇ ತೆಗೆದುಹಾಕಿ ತಮಗೆ ಬೇಕಾದಂತೆ ತಿರುಚಿದ್ದಾರೆ. ಬಸವಣ್ಣನವರ ಮತ್ತು ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ. ಈ ಬದಲಾವಣೆ ನಿಜಕ್ಕೂ ಖಂಡನಾರ್ಹ. ಬಸವಣ್ಣನವರ ಶುದ್ಧ, ಪಾರದರ್ಶಕ ಬದುಕಿಗೆ ಕಳಂಕ ತಂದಂತೆ. ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು ಎನ್ನುವುದು ಶುದ್ಧ ಸುಳ್ಳು. ಅವರು ಲಿಂಗಾಯತ ಧರ್ಮವನ್ನು ಜಾರಿಯಲ್ಲಿ ತಂದರು ಎಂದಾಗಬೇಕಿತ್ತು. ಇಂತಹ ಹಲವು ದೋಷಗಳಾಗಿವೆ. ಆದ್ದರಿಂದ ಕೂಡಲೇ ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು. ಇಲ್ಲವೇ ಹಿಂದಿನ ಪಠ್ಯವನ್ನೇ ಮುಂದುವರೆಸಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸದಿದ್ದರೆ ನಾಡಿನಾದ್ಯಂತ ಹೋರಾಟ ನಡೆಯುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಸಿದ್ದಾರೆ.

ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ, ಬಸವಣ್ಣನವರ ಕುರಿತ ಅಧ್ಯಯವನ್ನು ಪರಿಷ್ಕೃತ ಪಠ್ಯದಲ್ಲಿ ನೋಡಿದ ಕೂಡಲೇ ಎದೆಗೆ ಕಲ್ಲು ಹೊಡೆದಂತಾಯಿತು. ಬಸವಣ್ಣ ಹಾಗೂ ಕುವೆಂಪು ಅವರ ತತ್ವಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಈ ತಪ್ಪುಗಳನ್ನು ಕೂಡಲೇ ಸರ್ಕಾರ ಸರಿಪಡಿಸಬೇಕು. ಬಸವಣ್ಣನವರ ತತ್ವಗಳನ್ನು ತಿರುಚಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Share & Spread
error: Content is protected !!