ಮಾಜಿ ಸಂಸದೆ, ನಟಿ ರಮ್ಯಾ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿ ಅಶಿಸ್ತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಇದೀಗ ರಮ್ಯಾ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ.
ಮೈಸೂರು: ಮಾಜಿ ಸಂಸದೆ, ನಟಿ ರಮ್ಯಾ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿ ಅಶಿಸ್ತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಇದೀಗ ರಮ್ಯಾ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ.
ಈ ಸಂಬಂಧ ನಟಿ ರಮ್ಯಾ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ ಆರಂಭವಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ನಟಿಯ ಟ್ವೀಟ್ ಅನಗತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವನಾರಾಯಣ್, ನಟಿ ರಮ್ಯಾ ಅವರು, ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸುವ ಮೂಲಕ ಅಶಿಸ್ತು ತೋರಿದ್ದಾರೆ. ಟ್ವೀಟ್ ಮಾಡುವ ಬದಲು ಕಾಂಗ್ರೆಸ್ ನಾಯಕರ ಬಳಿಯೇ ನೇರವಾಗಿ ಸಮಸ್ಯೆಗಳನ್ನು ಹೇಳಬಹುದಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಥವಾ ರಾಜ್ಯ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ದೂರು ನೀಡಬಹುದಿತ್ತು ಎಂದು ಹೇಳಿದ್ದಾರೆ.
ಟ್ವಿಟರ್ ನಲ್ಲಿ ರಮ್ಯಾರಿಂದ ಟ್ರೋಲ್ ಗೆ ಒಳಗಾಗಿರುವ ನಲಪಾಡ್ ಅವರು ಮಾತನಾಡಿ, ನಾವು ಯಾವತ್ತೂ ರಮ್ಯಾ ವಿರುದ್ಧ ಅಲ್ಲ. ಅವರು ನಮ್ಮ ಪಕ್ಷದ ಮಾಜಿ ಸಂಸದೆ ಮತ್ತು ಅವರು ಚಿಕ್ಕ ವಯಸ್ಸಿನಲ್ಲಿ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆದರೆ ಯಾರಾದರೂ ನಮ್ಮ ನಾಯಕನನ್ನು ಪ್ರಶ್ನಿಸಿದರೆ ನಾವು ಸಮರ್ಥಿಸಿಕೊಳ್ಳುತ್ತೇವೆ. ಆಕೆ ಅದನ್ನು ಬಹಿರಂಗವಾಗಿ ಪ್ರಶ್ನಿಸಿದ್ದರಿಂದ ನಾವು ಪ್ರತಿಕ್ರಿಯಿಸಲು ಆ ವೇದಿಕೆಯನ್ನೇ ಬಳಸಿಕೊಂಡಿದ್ದೇವೆ. ಕಾಂಗ್ರೆಸ್ ಯುವ ಮುಖಂಡನಾಗಿ ನಾಯಕರನ್ನು ರಕ್ಷಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ತಿಳಿಸಿದ್ದಾರೆ.