ಮೂತ್ರವಿಸರ್ಜನೆ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗನ ಕಾಲಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಗುಂಡು ಹೊಡೆದಿರುವ ಘಟನೆ ಶನಿವಾರ ನಡೆದಿದೆ.
ಬೆಂಗಳೂರು: ಮೂತ್ರವಿಸರ್ಜನೆ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗನ ಕಾಲಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಗುಂಡು ಹೊಡೆದಿರುವ ಘಟನೆ ಶನಿವಾರ ನಡೆದಿದೆ.
ಬೆಂಗಳೂರಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿಸಿ ಆರೋಪಿ ನಾಗ ಪರಾರಿಯಾಗಿದ್ದ. 16 ದಿನಗಳ ಬಳಿಕ ನಾಗನನ್ನು ಪೊಲೀಸರು ಬಂಧಿಸಿ ಕರೆತರುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸ್ವಾಮೀಜಿ ವೇಷಧಾರಿಯಾಗಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಶುಕ್ರವಾರ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಇದರಂತೆ ಆರೋಪಿಯನ್ನು ವಾಹನದಲ್ಲಿ ಕರೆ ತರುವ ವೇಳೆ, ಮೂತ್ರ ವಿಸರ್ಜನೆಗೆ ಗಾಡಿ ನಿಲ್ಲಿಸಿ ಹೇಳಿದ್ದಾನೆ. ನೈಸ್ ರೋಡಲ್ಲಿ ಪೊಲೀಸರ ಬಳಿ ಆರೋಪಿ ಕೇಳಿಕೊಂಡಿದ್ದಾನೆ.
ನಂತರ ಪೊಲೀಸರು ಕೆಂಗೇರಿ ಮೇಲ್ಸೇತುವೆ ಬಳಿ ವಾಹನ ನಿಲ್ಲಿಸಿದ್ದರು. ಈ ವೇಳೆ ನಾಗೇಶ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಿಡಿಯಲು ಹೋದ ಕಾನ್ಸ್ಟೇಬಲ್ ಮಹಾದೇವಯ್ಯರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಬಳಿಕ ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ಪ್ರಶಾಂತ್ ಶರಣಾಗುವಂತೆ ಹೇಳಿ ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆರೋಪಿ ನಾಗೇಶ್ ಅದಕ್ಕೆ ಬಗ್ಗದೆ ಪರಾರಿ ಆಗಲು ಮುಂದಾಗಿದ್ದಾನೆ. ನಂತರ ಆರೋಪಿ ಬಲಗಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.
ಸದ್ಯ ಆರೋಪಿ ನಾಗೇಶ್ ಹಾಗೂ ಗಾಯಗೊಂಡಿರುವ ಕಾನ್ಸ್ಟೇಬಲ್ ಮಹದೇವಯ್ಯಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.