ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ: ಕೃಷಿ ಸಚಿವ ಬಿ.ಸಿ.ಪಾಟೀಲ್

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಹಂಗಾಮ ಪ್ರಾರಂಭವಾಗಿದೆ. ಕೆಲವೆಡೆ ರಸಗೊಬ್ಬರ ಕೊರತೆ ಇದೆ ಅಂತ ಸುದ್ದಿಯಾಗಿದೆ. ಆ ರೀತಿ ಯಾವುದೇ ಕೊರತೆ ಇಲ್ಲ. ರಸಗೊಬ್ಬರ ಕೃತಕ ಅಭಾವ ಸೃಷ್ಟಿ ಮಾಡಲು ಈ ರೀತಿ ವಿಚಾರ ಹರಿದಾಡಿರಬಹುದು. ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದರು.

 

9,85,000 ಮೆಟ್ರಿಕ್ ಟನ್ ರಸ ಗೊಬ್ಬರ ಪ್ರಸ್ತುತ ಇದೆ. 7 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ನೀಡಲಾಗಿದೆ. ಡಿಎಪಿ ಗೊಬ್ಬರ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ ಸ್ಟಾಕ್ ಕೂಡ ಬರುತ್ತಿದೆ.

ಕೇಂದ್ರ 3,60,000 ಮೆಟ್ರಿಕ್ ಟನ್ ಹಂಚಿಕೆ ಮಾಡಿದೆ. ರೈತರಿಗೆ ಗೊಬ್ಬರದಲ್ಲಿ ಸಬ್ಸಿಡಿ ಕೂಡ ನೀಡಲಾಗ್ತಿದೆ. ಮೊನ್ನೆ ಕೂಡ ಪ್ರಧಾನಿ ಸಬ್ಸಿಡಿ ದರ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಬಿತ್ತನೆ ಬೀಜದ ಕೊರತೆಯೂ ಇಲ್ಲ. ಬೇಡಿಕೆ 5,98,326 ಇದ್ದು, ಲಭ್ಯತೆ 8,64,539 ಇದೆ. ಬೆಳೆ ವಿಮೆ ಇದುವರೆಗೂ ಬಂದಿಲ್ಲ ಅಂತ ವರದಿಯಾಗಿದೆ. ಈವರೆಗೂ 2,30,000 ರೈತರಿಗೆ ಡಿಬಿಟಿ ಮೂಲಕ ಪರಿಹಾರ ನೀಡಲಾಗಿದೆ ಎಂದರು.

ಇನ್ನು ಕಾಂಗ್ರೆಸ್ನ ಭ್ರಷ್ಟಾಚಾರ ಆರೋಪಗಳಿಗೆ ತಿರುಗೇಟು ಕೊಟ್ಟ ಬಿ.ಸಿ.ಪಾಟೀಲ್, ಸಿದ್ದರಾಮಯ್ಯ ಕಾಲದಲ್ಲಿ ಶುದ್ದ ಹಸ್ತರಿದ್ರಾ?  ಕೆಂಪಯ್ಯ ಇಟ್ಟುಕೊಂಡು ಏನೆಲ್ಲಾ ಮಾಡಿದ್ರು. ಸ್ಟೀಲ್ ಬ್ರಿಡ್ಜ್ ಹಗರಣ ಎಲ್ಲಿಗೆ ಬಂದಿತ್ತು, ಯಾಕೆ ನಿಲ್ತು? ಭ್ರಷ್ಟಾಚಾರಾ ಇಲ್ಲ ಅಂದ್ರೆ ಮೂರ್ಖರಾಗ್ತೀವಿ. ಪ್ರಿವೆನ್ಷನ್ ಆಫ್ ಕರೆಪ್ಷನ್ ಆಕ್ಟ್ ಇದೆ. ಅದರ ಉದ್ದೇಶವೇ ಭ್ರಷ್ಟಾಚಾರ ಕಡಿಮೆ ಮಾಡಬೇಕು ಅಂತ. ಕಾಂಗ್ರೆಸ್ ನವರು ಆಪಾದನೆ ಬಿಟ್ರೆ ಬೇರೆನೂ ಹೇಳಿಲ್ಲ ಎಂದು ಟೀಕಿಸಿದರು.

ಪೇಪರ್ ನಲ್ಲಿ ಹೆಸರು ಬರಬೇಕು ಅಂತ, ಬಿಜೆಪಿ ಮೇಲೆ, ಸಚಿವರ ಮೇಲೆ ಆರೋಪ ಮಾಡ್ತಾರೆ. ಅದಕ್ಕೆ ಸಾಕ್ಷಾಧಾರ ನೀಡಬೇಕು. ಜನರು ತೀರ್ಪು ನೀಡೋರು. ಸುಮ್ಮನೆ ನಿರಾಧಾರವಾಗಿ ಆರೋಪ ಮಾಡಬಾರದು.

ಮುಖ್ಯಮಂತ್ರಿ ಹುದ್ದೆ ಮಾರಾಟ ಎಂಬ ಯತ್ನಾಳ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ಯತ್ನಾಳ್ ಕೂಡ ಸಾಕ್ಷಾಧಾರ ನೀಡಬೇಕು. ಚಪಲಕ್ಕೆ ಯಾರ್ಯಾರು ಏನೇನೋ ಹೇಳ್ತಿರ್ತಾರೆ. ಪಕ್ಷದಲ್ಲಿ ಯಾರ್ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ. ವಲಸೆ ಬಂದಿರೋರು ನಾವ್ಯಾರು ಬೇಸರವಾಗಿಲ್ಲ.

ಬಿಜೆಪಿಗೆ ಬಂದ ಮೇಲೆ ಪಕ್ಷದ ಶಿಸ್ತನ್ನ ನೋಡಿದ್ದೇನೆ. ಪಕ್ಷ ಸಂಘಟನೆ, ಬೂತ್ ಮಟ್ಟದ ಕಾರ್ಯಕ್ರಮ ಎಲ್ಲವನ್ನೂ ನೋಡಿ ಕಲಿತಿದ್ದೇವೆ. ಆದ್ರೆ ಅದೆಲ್ಲವೂ ಅಲ್ಲಿ (ಕಾಂಗ್ರೆಸ್‌ನಲ್ಲಿ) ಇರಲಿಲ್ಲ. ಅಸಮಾಧಾನ ಅನ್ನೋದು ಸುಳ್ಳು ಎಂದು ಬಿ.ಸಿ ಪಾಟೀಲ್ ಸ್ಪಷ್ಟನೆ ನೀಡಿದರು.

Share & Spread
error: Content is protected !!