ಜೆಡಿಎಸ್ ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಪಕ್ಷ ತೊರೆಯುವುದು ಖಚಿತ ಎಂದು ಹೇಳಲಾಗುತ್ತಿದೆ.
ಮಂಡ್ಯ: ಜೆಡಿಎಸ್ ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಪಕ್ಷ ತೊರೆಯುವುದು ಖಚಿತ ಎಂದು ಹೇಳಲಾಗುತ್ತಿದೆ.
ಮರಿತಿಬ್ಬೇಗೌಡರ ಮುಂದಿನ ರಾಜಕೀಯ ನಿಲ್ದಾಣ ಕಾಂಗ್ರೆಸ್ ಆಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮಾಜಿ ಸಚಿವ ಎಸ್.ಡಿ. ಜಯರಾಂ ಪುತ್ರ ಅಶೋಕ್ ಜಯರಾಂ, ಮಾಜಿ ಐಆರ್‌ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್‌ಗೌಡ ಬೆನ್ನಲ್ಲೇ ಇದೀಗ ಮಂಡ್ಯದ ಮತ್ತೊಬ್ಬ ಮುಖಂಡ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಜೆಡಿಎಸ್ ತೊರೆಯುವ ಸುಳಿವು ನೀಡಿದ್ದಾರೆ.
‘ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಧೋರಣೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ನಿತ್ಯವೂ ಕಿರುಕುಳ, ಹಿಂಸೆ ಅನುಭವಿಸುತ್ತಿದ್ದೇನೆ’ ಎಂದು ಮರಿತಿಬ್ಬೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
‘ಸದನದ ಮುಂದೆ ರೈತರ ಮಸೂದೆ, ಎಪಿಎಂಸಿ ಮಸೂದೆ ಬಂದಾಗ ಸಭಾನಾಯಕನಾಗಿ ನಾನು ಅವುಗಳ ವಿರುದ್ಧ ಮಾತನಾಡಿದ್ದೆ. ಆದರೆ ಮತಕ್ಕೆ ಹಾಕುವ ವೇಳೆ ನಮ್ಮ ಪಕ್ಷದ ಶಾಸಕರೆಲ್ಲರೂ ಹೊರಗೆ ಎದ್ದು ಹೋದರು. ಮಸೂದೆ ಅನುಮೋದನೆಗೊಳ್ಳುವಾಗ ಅವುಗಳ ಪರವಾಗಿ ತೀರ್ಮಾನ ಕೈಗೊಂಡಿದ್ದು ಏಕೆ? ಇಂತಹ ಸಂದರ್ಭದಲ್ಲಿ ಹಿಂಸೆ, ಕಿರುಕುಳ ಅನುಭವಿಸಿದ್ದೇನೆ’ ಎನ್ನುತ್ತಾ ಭಾವುಕರಾದರು.
‘ನಾನು ಹೇಳುವ ಮಾತುಗಳಿಗೆ, ಸಲಹೆಗಳಿಗೆ ಕಿಂಚಿತ್ತೂ ಬೆಲೆ ಇಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ವರ್ತನೆಯಿಂದ ಬೇಸರವಾಗಿದೆ. ನನ್ನ ಅವಧಿ ಮುಗಿಯುವವರೆಗೆ ಜೆಡಿಎಸ್‌ನಲ್ಲಿ ಇರುತ್ತೇನೆ. ನನ್ನ ಹಿತೈಷಿಗಳು, ಸ್ನೇಹಿತರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದರು.
ದಳಪತಿಗಳ ವಿರುದ್ಧ ಬಹಿರಂಗವಾಗಿಯೇ ತಿರುಗಿಬಿದ್ದಿರುವ ಅವರು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕದಂತೆ ಸೋಮವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮನವಿ ಮಾಡಿದ್ದಾರೆ.
ಮರಿತಿಬ್ಬೇಗೌಡ ಅವರು ಈಗಾಗಲೇ ಕಾಂಗ್ರೆಸ್‌ನಲ್ಲಿ ಒಂದು ಹೆಜ್ಜೆ ಇಟ್ಟಿರುವುದು ಸ್ಪಷ್ಟವಾಗಿದೆ. ಅವರ ಪರಿಷತ್ ಸದಸ್ಯತ್ವ ಅವಧಿ 2024ರ ಜೂನ್‌ಗೆ ಮುಗಿಯಲಿದೆ. ಅಲ್ಲಿಯವರೆಗೆ ಕಾಯದೆ ಸದ್ಯದಲ್ಲೇ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಈ ಕುರಿತು ಕಾಂಗ್ರೆಸ್ ನಾಯಕರೊಂದಿಗೆ ಎಲ್ಲಾ ರೀತಿಯ ಚರ್ಚೆಯೂ ಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ.