* ಕೋರ್ಟ್ ಆದೇಶದ ಬೆನ್ನಲ್ಲೇ ಮಸೀದಿಗಳ ಲೌಡ್ಸ್ಪೀಕರ್ ತೆರವುಗೊಳಿಸಲು ಮನವಿ ಮಾಡಿದ್ದ ಹಿಂದೂಪರ ಸಂಘಟನೆಗಳು
* ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸುವವರೆಗೂ ದೇವಸ್ಥಾನಗಳಲ್ಲಿ ಸುಪ್ರಭಾತ
* ರಾಜ್ಯದಲ್ಲೀಗ ಆಜಾನ್ VS ಸುಪ್ರಭಾತ: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ?
ಬೆಂಗಳೂರು(ಮೇ.09): ಮಸೀದಿಗಳಲ್ಲಿನ ಅಜಾನ್ಗೆ ವಿರುದ್ಧವಾಗಿ ಈ ಹಿಂದೆ ಘೋಷಿಸಿದಂತೆ ರಾಜ್ಯಾದ್ಯಂತ ಹಿಂದೂ ದೇವಾಲಯಗಳಲ್ಲಿ ಸೋಮವಾರ ಹನುಮಾನ್ ಚಾಲೀಸಾ, ಸುಪ್ರಭಾತ, ಭಕ್ತಿಗೀತೆ, ಭಜನೆ, ಭಾಜಾ ಭಜಂತ್ರಿ, ನಾಸಿಕ್ ಡೊಳ್ಳು, ಸಮಾಳ, ಶಂಖ, ಜಾಗಟೆಗಳ ಸದ್ದು ಮೊಳಗಲಾರಂಭಿಸಿದೆ. ಮುಸಲ್ಮಾನರು ನಮಾಜ್ ಮಾಡುವ ಸಮಯಕ್ಕೆ ಸರಿಯಾಗಿ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳಲ್ಲಿ ಸುಪ್ರಭಾತ ಮೊಳಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂದೂ ಭಕ್ತಿಗೀತೆಗಳ ಸದ್ದು ಕೇಳಿ ಬಂದಿದೆಯಾದರೂ ತುಮಕೂರು ಹಾಗೂ ಶಿವಮೊಗ್ಗದಲ್ಲಿ ಈ ಅಭಿಯಾನಕ್ಕೆ ಬೆಂಬಲ ಸಿಕ್ಕಿಲ್ಲ ಎಂಬುವುದು ಉಲ್ಲೇಖನೀಯ.
ಶಬ್ದಮಾಲಿನ್ಯ ಉಂಟು ಮಾಡುವಂತಹ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ನ್ಯಾಯಾಲಯದ ಆದೇಶವಿರುವುದರಿಂದ ಮಸೀದಿಯಲ್ಲಿ ಆಜಾನ್ ಮೈಕ್ಗಳನ್ನು ಮೇ 8ರ ಒಳಗೆ ತೆರವುಗೊಳಿಸಬೇಕು ಇಲ್ಲವಾದಲ್ಲಿ ಮೇ 9ರಂದು ರಾಜ್ಯದ ಸಾವಿರಕ್ಕೂ ಅಧಿಕ ದೇವಾಲಯಗಳಲ್ಲಿ ಹನುಮಾನ್ ಚಾಲೀಸ, ಸುಪ್ರಭಾತ, ಭಕ್ತಿಗೀತೆಗಳನ್ನು ಹಾಕಲಾಗುವುದು ಎಂದು ಶ್ರೀರಾಮ ಸೇನೆ ಸಂಘಟನೆ ಎಚ್ಚರಿಕೆ ನೀಡಿತ್ತು. ಈ ಗಡುವು ಮುಗಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಅಭಿಯಾನಕ್ಕೆ ಮುಂದಾಗಿದೆ. ಹೀಗಿರುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಹುಬ್ಬಳ್ಳಿ ಸೇರಿದಂತೆ ಹಲವೆಡೆ ಮಸೀದಿಗಳ ಆಸುಪಾಸು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. ಹಾಗಾದ್ರೆ ಈ ಅಭಿಯಾನಕ್ಕೆ ಯಾವ್ಯಾವ ಜಿಲ್ಲೆಗಳಲ್ಲಿ ಬೆಂಬಲ ಸಿಕ್ಕಿದೆ ಇಲ್ಲಿದೆ ವಿವರ
ಮೈಸೂರು:
ಶ್ರೀ ತ್ರಿಪುರ ಭೈರವಿ ಮಠದ ಆಜನೇಯ ದೇವಸ್ಥಾನದಲ್ಲಿ ಸುಪ್ರಭಾತ ಮೊಳಗಿದೆ. ಮೈಸೂರಿನ ಶಿವರಾಮಂಪೇಟೆಯಲ್ಲಿ ಇರುವ ದೇವಸ್ಥಾನ ಇದಾಗಿದ್ದು, ಸುಪ್ರಭಾತಕ್ಕೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಖುದ್ದು ಹಾಜರಾಗಿದ್ದಾರೆ. ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ರಾಮ ಭಕ್ತರು ಶ್ರೀರಾಮ ಭಜನೆ ಆರಂಭಿಸಿದ್ದಾರೆ. ಚಿಕ್ಕ ಗಡಿಯಾರದ ಮಸೀದಿಯ ದ್ವನಿ ಮೀರಿಸುವಂತೆ ಇಲ್ಲಿ ಸುಪ್ರಭಾತದ ದ್ವನಿ ಮೊಳಗಿದೆ.
ಗದಗ
ಗದಗದ ವಿವಿಧೆಡೆ ಬ್ರಾಹ್ಮೀ ಮುಹೂರ್ತದಲ್ಲಿ ಭಜನೆ ಆರಂಭವಾಗಿದೆ. ಶ್ರೀರಾಮ ಸೇನೆ ಕಾರ್ಯಕರ್ತರು ಬೆಳಗಿನ 4 : 55 ಕ್ಕೆ ಭಜನೆ ಮೊಳಗಿಸಿದ್ದು, ನಗರದ ವಿವಿಧ 10 ದೇವಸ್ಥಾನಗಳಲ್ಲಿ ಏಕ ಕಾಲಕ್ಕೆ ಭಜನೆ ಆರಂಭವಾಗಿದೆ. ಐತಿಹಾಸಿಕ ಜುಮ್ಮಾ ಮಸೀದಿ ಕೂಗಳತೆ ದೂರದಲ್ಲಿ ಆಜಾನ್ ಗೆ ವಿರುದ್ಧವಾಗಿ ಭಜನೆ ನುಡಿಸಲಾಗಿದೆ. ಜೋಡ ಮಾರುತಿ ಮಂದಿರ, ರಾಜೂಟೇಶ್ವರ ದೇವಸ್ಥಾನ, ಮುಳಗುಂದ ನಾಕಾ ಬಳಿಯ ಶಿವಾಜಿ ಮಂದಿರ, ವಕ್ಕಲಗೇರಿಯ ದುರ್ಗಾದೇವಿ ಮಂದಿರ, ಹೊನ್ನೆತೆಮ್ಮನ ಗುಡಿ, ಪತ್ರೇಶ್ವರ ದೇವಸ್ಥಾನ, ದ್ಯಾಮವ್ವ, ಖಾನ್ ತೋಟದ ಅಚನೂರು ಹನುಮ ಮಂದಿರ, ಗದುಗಿನ ವೀರನಾರಾಯಣ ಮಂದಿರದಲ್ಲಿ ಭಜನೆ ಸದ್ದು ಮಾಡಿದೆ.
ಸೇನೆ ಕಾರ್ಯಕರ್ತರು ಸುಪ್ರಭಾತ, ಭಕ್ತಿಗೀತೆ, ಮಂತ್ರಗಳ ಕ್ಯಾಸೆಟ್ ಪ್ಲೇ ಮಾಡಿದ್ದು, ಬೆಳಗ್ಗೆ 5: 15 ಮೊಳಗುವ ಆಜಾನ್ ಗೆ 20 ನಿಮಿಷಗಳ ಮುಂಚಿತವಾಗಿ ಭಜನೆ ಆರಂಭಿಸಲಾಗಿದೆ. ಇನ್ನು ಭಜನೆ v/s ಭಜನೆ ಹಿನ್ನೆಲೆ ಜುಮ್ಮಾ ಮಸೀದಿ ಆವರಣದಲ್ಲಿ ಪೊಲೀಸ್ ಬಿಗಿಭದ್ರತೆ ನೀಡಲಾಗಿದ್ದು, ಒಂದು ಕೆಎಸ್ ಆರ್ಪಿ ತುಕುಡಿ ಸೇರಿದಂತೆ ಸ್ಥಳೀಯ ಪೊಲೀಸರಿಂದ ಭದ್ರತೆ ಕೊಡಲಾಗಿದೆ.
ಬೆಳಗಾವಿ
ಬೆಳಗಾವಿಯ ಆರ್ಟಿಒ ವೃತ್ತದಲ್ಲಿರುವ ಸೋನ್ಯಾ ಮಾರುತಿ ದೇವಸ್ಥಾನದಲ್ಲಿ ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತ್ಕರ್ ಸೇರಿ ಶ್ರೀರಾಮಸೇನೆ ಕಾರ್ಯಕರ್ತರಿಂದ ವಿಶೇಷ ಪೂಜೆ ನಡೆಯಿತು. ಧ್ವನಿವರ್ಧಕ ಹಾಕಿ ಭಕ್ತಿಗೀತೆ ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದರು. ಮಾರುತಿ ದೇವರ ಭಜನೆ ಗೀತೆ ಹಾಕಿ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀರಾಮಸೇನೆ ಅಧ್ಯಕ್ಷ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಜಯಪುರ
ಅಜಾನ್ ಮೈಕ್ ವಿರುದ್ಧ ಹನುಮಾನ್ ಚಾಲಿಸಾ ಅಭಿಯಾನ ವಿಜಯಪುರದಲ್ಲೂ ಸದ್ದು ಮಾಡಿದೆ. ವಿಜಯಪುರ ನಗರದ ಜಮಖಂಡಿ ರಸ್ತೆ ಬಳಿ ಸುಪ್ರಭಾತ ಭಕ್ತಿ ಗೀತೆ ಹಾಗೂ ವಿದ್ಯುತ್ ಚಾಲಿತ ವಾಧ್ಯ ಮೊಳಗಿಸಿ ಅಭಿಯಾನ ಆರಂಭಿಸಲಾಗಿದೆ. ಮರಡಿ ಬಸವೇಶ್ವರ ದೇವಸ್ಥಾನದಲ್ಲಿ ಹಿಂದೂ ಪರ ಯುವಕರು ಈ ಅಭಿಯಾನ ಆರಂಭಿಸಿದ್ದಾರೆ. ಭೀಮು ಮಾಶ್ಯಾಳ, ಶಶಿ ಗಂಗನಹಳ್ಳಿ, ಈರಪ್ಪ ಹತ್ತಿ ಹಾಗೂ ಇತರರಿಂದ ಅಭಿಯಾನ ನಡೆದಿದ್ದು, ಅಜಾನ್ಗೆ ಬಳಕೆ ಮಾಡುವ ಧ್ವನಿವರ್ದಕ ತೆರವು ಮಾಡಲು ಒತ್ತಾಯ ಮಾಡಿದ್ದಾರೆ. ಅಲ್ಲದೇ ಅಜಾನ್ ಗೆ ಬಳಸೋ ಧ್ವನಿವರ್ಧಕ ಬಳಕೆ ನಿಲ್ಲಿಸೋವರೆಗೂ ನಮ್ಮ ಅಭಿಯಾನ ನಡೆಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಮೊಳಗದ ಸುಪ್ರಭಾತ
ಆಜಾನ್ ವಿರುದ್ಧ ತುಮಕೂರಿನಲ್ಲಿ ಸುಪ್ರಭಾತ ನಡೆಸಬೇಕಿತ್ತು ಆದರೆ ಇದುವರೆಗೂ ದೇವಾಲಯಗಳ ಶ್ರೀರಾಮಸೇನೆ ಕಾರ್ಯಕರ್ತರು ಆಗಮಿಸಿಲ್ಲ. ತುಮಕೂರು ನಗರದ ಟೌನ್ ಹಾಲ್ ಬಳಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಪೊಲೀಸರು ಹೊರತುಪಡಿಸಿ ಯಾರ ಪತ್ತೆ ಇಲ್ಲ.
ಕಲಬುರಗಿಯಲ್ಲೂ ಶುರುವಾಗಿದೆ ಭಜನೆ
ಕಲಬುರಗಿಯಲ್ಲೂ ಆಜಾನ್ಗೆ ಪರ್ಯಾಯ ಹನುಮಾನ ಚಾಲಿಸಾ ಪಠಣ ನಡೆದಿದೆ. ಆಜಾನ್ ಸೆ ಅಜಾದಿ ಘೋಷಣೆಯೊಂದಿಗೆ ಶ್ರೀರಾಮ ಸೇನೆ ಅಭಿಯಾನ ಆರಂಭಿಸಿದೆ. ಕಲಬುರಗಿಯ ಸಂತೋಷ ಕಾಲೋನಿಯ ದಕ್ಷಿಣ ಮುಖಿ ಹನುಮಾನ ದೇವಸ್ಥಾನದಲ್ಲಿ ಬೆಳಿಗ್ಗೆ 5 ಗಂಟೆಗೆ ಅಭಿಯಾನ ಆರಂಭವಾಗಿದ್ದು, ಮಸೀದಿಗಳಲ್ಲಿ ಅಜಾನ್ ಮೊಳಗುವ ಹೊತ್ತಲ್ಲೇ ಭಜನೆ, ಹನುಮಾನ ಚಾಲಿಸಾ ಮಂತ್ರ ಘೋಷ ಮೊಳಗಿದೆ.
ಹಾಸನ ಅಜಾನ್ ಬದಲಾಗಿ ಭಜನ್ ಅಭಿಯಾನ
ಹಾಸನದಲ್ಲೂ ಶ್ರೀರಾಮಸೇನೆ ನೇತೃತ್ವದಲ್ಲಿ ಭಜನೆ ಮೂಲಕ ದೇವರ ಸ್ತುತಿಸಿ ಕಾರ್ಯಕ್ರಮ ಆರಂಭಿಸಲಾಗಿದ್ದು, ಹಾಸನದ ಸಂಗಮೇಶ್ವರ ದೇಗುಲದಲ್ಲಿ ಶ್ರೀರಾಮಸೇನೆ ಜಿಲ್ಲಾದ್ಯಕ್ಷ ಜಾನೆಕೆರೆ ಹೇಮಂತ್ ನೇತೃತ್ವದಲ್ಲಿ ಭಜನೆ ನಡೆದಿದೆ.
ಹುಬ್ಬಳ್ಳಿಯ ಸಿದ್ಧರೂಢ ಮಠದಲ್ಲಿ ನಿತ್ಯ ಮೊಳಗಲಿದೆ ಭಕ್ತಿಸೂದೆ
ಹುಬ್ಬಳ್ಳಿಯ ಸಿದ್ಧರೂಢ ಮಠದಲ್ಲಿ ಬೆಳಗಿನ ಜಾವದ ಸೋಮುವಾರದ ವಿಶೇಷ ಪೂಜೆ ನಡೆದಿದೆ. ಓಂ ನಮಃ ಶಿವಾಯ ಮಂತ್ರಘೋಷ, ಭಜನೆ, ಘಂಟಾ ವಾದ್ಯ ಮೊಳಗಿದೆ. ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಸಿದ್ಧಾರೂಢರಿಗೆ ವಿಶೇಷ ಪೂಜೆ ನಡೆಯುವುದು ವಾಡಿಕೆ. ಹೀಗಾಗಿ ನೂರಾರು ಭಕ್ತರಿಂದ ವಿಶೇಷ ಪೂಜೆ ಮತ್ತು ಭಜನೆ ಮಾಡಿದ್ದಾರೆ. ಇಲ್ಲಿ ಪ್ರತಿನಿತ್ಯ 5:25 ಕ್ಕೆ ಮಹಾ ಮಂಗಳಾರತಿ ನಡೆಸುವುದು ವಾಡಿಕೆ.
ಹೊಸಪೇಟೆ
ಹೊಸಪೇಟೆಯ ಶ್ರೀ ಪಾದಗಟ್ಟಿ ಆಂಜನೇಯ ಸ್ವಾಮಿ ದೇಗುಲದ ಬಳಿ ಹನುಮಾನ್ ಚಾಲೀಸಾ ಪಠಿಸಲಾಗಿದೆ. ಶ್ರೀರಾಮ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ್ ಮರಡಿ ನೇತೃತ್ವದಲ್ಲಿ ಇದು ಆರಂಭವಾಗಿದೆ. ಹೊಸಪೇಟೆ ತಾಲೂಕು ಅಧ್ಯಕ್ಷ ಜಗದೀಶ್ ಕಾಮಾಟಗಿ, ಉಪಾಧ್ಯಕ್ಷ ಸೂರಿ ಬಂಗಾರು ಸೇರಿದಂತೆ ಹಲವು ಶ್ರೀರಾಮ ಸೇನೆಯ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಹೊಸಪೇಟೆಯ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ನೇತೃತ್ವದಲ್ಲಿ ಭಾರಿ ಬಂದೋಬಸ್ತ್ ಮಾಡಲಾಗಿದೆ. ಪಾದಗಟ್ಟಿ ಆಂಜನೇಯನ ದೇವಸ್ಥಾನದ ಅನತಿ ದೂರದಲ್ಲಿ ಮಸೀದಿ ಇದೆ ಎಂಬುವುದು ಉಲ್ಲೇಖನೀಯ.
ಶಿವಮೊಗ್ಗದಲ್ಲಿ ಸುಪ್ರಭಾತ ಅಭಿಯಾನ ನಡೆಯಲಿಲ್ಲ
ಇನ್ನುಮಲೆನಾಡು ಶಿವಮೊಗ್ಗದಲ್ಲಿ ಶ್ರೀರಾಮ ಸೇನೆಯ ಅಭಿಯಾನಕ್ಕೆ ಬೆಂಬಲ ಸಿಕ್ಕಿಲ್ಲ. ಶಿವಮೊಗ್ಗದ ದೇಗುಲಗಳಲ್ಲಿ ಸುಪ್ರಭಾತ, ಹನುಮಾನ್ ಚಾಲಿಸಾ ನಡೆದಿಲ್ಲ.
ಬಾಗಲಕೋಟೆ
ಬಾದಾಮಿ ಪಟ್ಟಣದ ವೀರಾಂಜನೇಯ ದೇವಸ್ಥಾನದಲ್ಲಿ ಭಕ್ತಿಗೀತೆಗಳ ಸಿಂಚನ ಕೇಳಿ ಬಂದಿದೆ. ಸ್ಪೀಕರ್ ಮೂಲಕ ದೇವಸ್ಥಾನದಲ್ಲಿ ಭಕ್ತಿ ಗೀತೆಗಳ ನಾದ ನುಡಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದ ಜಯನಗರದಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ ಈ ಅಭಿಯಾನ ಆರಂಭಿಸಲಾಗಿದೆ.