ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ ಇರುವ ಪಾವಗಡ ತಾಲ್ಲೂಕಿನ ತಿರುಮಣಿ ಹೋಬಳಿಯಲ್ಲಿ ಇದೀಗ ಹೊಸ ಯೋಜನೆಯಾದ ‘ರೋಶನಿ’ಗೆ ಚಾಲನೆ ದೊರೆತಿದ್ದು, ಈ ಭಾಗದ ನಿರುದ್ಯೋಗಿ ಯುವ ಜನಾಂಗಕ್ಕೆ ತರಬೇತಿ ನೀಡುವ ಉದ್ದೇಶ ಹೊಂದಿದೆ
ತುಮಕೂರು: ಏಷ್ಯಾದ ಅತಿದೊಡ್ಡ ಸೋಲಾರ್ ಪಾರ್ಕ್ ಇರುವ ಪಾವಗಡ ತಾಲ್ಲೂಕಿನ ತಿರುಮಣಿ ಹೋಬಳಿಯಲ್ಲಿ ಇದೀಗ ಹೊಸ ಯೋಜನೆಯಾದ ‘ರೋಶನಿ’ಗೆ ಚಾಲನೆ ದೊರೆತಿದ್ದು, ಈ ಭಾಗದ ನಿರುದ್ಯೋಗಿ ಯುವ ಜನಾಂಗಕ್ಕೆ ತರಬೇತಿ ನೀಡುವ ಉದ್ದೇಶ ಹೊಂದಿದೆ. ಐದು ವರ್ಷಗಳ ಹಿಂದೆ, ಸ್ಥಳೀಯ ರೈತರು ತಮ್ಮ ಜಮೀನನ್ನು ಸೋಲಾರ್ ಪಾರ್ಕ್ಗೆ ಬಿಟ್ಟುಕೊಟ್ಟಿದ್ದರು ಮತ್ತು ಅನೇಕ ಕಂಪನಿಗಳು ವಿದ್ಯುತ್ ಉತ್ಪಾದಿಸಲು ನವೀಕರಿಸಬಹುದಾದ ಇಂಧನ ಸ್ಥಾವರಗಳನ್ನು ಸ್ಥಾಪಿಸಿದವು.
ರೋಶನಿ ಎಂಬುದು ಟಾಟಾ ಪವರ್ ರಿನ್ಯೂವಬಲ್ ಎನರ್ಜಿಯ ಉಪಕ್ರಮವಾಗಿದೆ. ಸಿದ್ಧಾರ್ಥ ಕನ್ಸ್ಟ್ರಕ್ಷನ್ ಕಂಪನಿಯ ಸಹಯೋಗದೊಂದಿಗೆ, ತಿರುಮಣಿಯಲ್ಲಿ ವೃತ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ತೆರೆದಿದೆ. ಇಲ್ಲಿ ಟೈಲರಿಂಗ್, ಕರಕುಶಲ ವಿನ್ಯಾಸ ಮತ್ತು ಸೆಲ್ ಫೋನ್ ರಿಪೇರಿ ಮತ್ತಿತರ ತರಬೇತಿ ನೀಡಲಾಗುತ್ತದೆ.
ವೃತ್ತಿ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಿದ್ಧಾರ್ಥ ಕನ್ಸ್ಟ್ರಕ್ಷನ್ ಕಂಪನಿಯ ನಾಣಿ, ಈ ಭಾಗದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುವ ಭರವಸೆ ಇದೆ. ಆರಂಭದಲ್ಲಿ, ಮಹಿಳೆಯರಿಗೆ 45 ದಿನಗಳಲ್ಲಿ ಹೊಲಿಗೆ ಮತ್ತು ಕಸೂತಿಯಲ್ಲಿ ತರಬೇತಿ ನೀಡಲು ಗಮನ ಕೇಂದ್ರೀಕರಿಸಲಾಗಿದೆ ಎಂದರು.
ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಹೊಲಿಗೆ ಯಂತ್ರ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಮುಂಬರುವ ವರ್ಷಗಳಲ್ಲಿ, ಟಾಟಾ ಪವರ್ ನಿರುದ್ಯೋಗಿ ಪುರುಷರಿಗಾಗಿ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್ನಂತಹ ಇತರ ಕೋರ್ಸ್ಗಳನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಅವರು ತಿಳಿಸಿದರು.