ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸುವುದಕ್ಕೆ ಹೋರಾಟ ಮಾಡಿದರು. ಸಮಾಜದಲ್ಲಿನ ಮೇಲುಕೀಳು ಎಂಬ ತಾರತಮ್ಯವನ್ನು ತೊರೆದು ಎಲ್ಲರಿಗೂ ಶಿಕ್ಷಣ ದೊರಕಿಸಲು ಹೋರಾಡಿದರು ಎಂದು ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಎಚ್.ಡಿ. ಉಮಾಶಂಕರ ಅವರು ತಿಳಿಸಿದರು.
ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಕಾನೂನು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ರಾಮನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಅಭಿಯಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಂದಿನ ಕಾಲದಲ್ಲಿ ಕೆಲವರ ಬಳಿ 500 ರಿಂದ 1000 ಎಕರೆ ಜಮೀನು ಇರುತ್ತದೆ ಆದರೆ ಇನ್ನು ಕೆಲವರ ಬಳಿ ಜಮೀನು ಇರುವುದಿಲ್ಲ. ಶೇ. 75 ರಷ್ಟು ಜನರ ಬಳಿ ಜಮೀನು ಇರುವುದಿಲ್ಲ ಇದು ಅಸಮಾನತೆ ಸೃಷ್ಠಿಸುತ್ತಿದೆ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಭೂಮಿಯನ್ನು ರಾಷ್ಟಕರಣ ಮಾಡಿ ಎಂದು ತಿಳಿಸಿದ್ದರು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮಾತ್ರ ಸಂವಿಧಾನವನ್ನು ರೂಪಿಸಲಿಲ್ಲ ಅವರು ಎಲ್ಲಾ ಸಮುದಾಯದವರಿಗೆ ಸಂವಿಧಾನ ರೂಪಸಿದರು. ದೇಶದಲ್ಲಿರುವ ಎಲ್ಲರಿಗೂ ಸಹ ಕಡ್ಡಾಯವಾಗಿ ಶಿಕ್ಷಣ ನೀಡಬೇಕು, ಸಹಪಂಕ್ತಿ, ಆಹಾರ ಪದ್ದತಿ, ಅಂತರ್ಜಾತಿ ವಿವಾಹ, ಜಾತಿ ವಿನಾಶವಾದ ಬಗ್ಗೆ ಹೆಚ್ಚು ಹೋರಾಟ ಮಾಡಿದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಅವರ ಕುರಿತ ಪುಸ್ತಕವನ್ನು ಬಹುಮಾನವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಜಿ. ರಮೇಶ್ ಬಾಬು, ಸಂಪಾದಕರಾದ ಚೆಲುವರಾಜು, ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗಶೇಷಮ್ಮ, ಎನ್.ಎಸ್.ಎಸ್. ಸಂಚಾಲಕರಾದ ಡಾ. ಸುಮಂತ್ ಹೆಚ್.ಎಂ., ಪ್ರಾದ್ಯಾಪಕರಾದ ಅಂಕನಹಳ್ಳಿ ಪಾರ್ಥ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.