*ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಸೊಸೈಟಿ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ*

ಚನ್ನಪಟ್ಟಣ :ತಾಲ್ಲೂಕಿನಿಂದ ಬೆಂಗಳೂರಿಗೆ ಹೋಗಿ, ಜೀವನ ಕಟ್ಟಿಕೊಂಡು ತಾಲ್ಲೂಕಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಿಂದ ಕ್ರಿಯೇಟಿವ್ ಅಸೋಸಿಯೇಷನ್ ಮತ್ತು ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಿ ಅದರ ಮೂಲಕ ತಾಲ್ಲೂಕಿನ ಜನತೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿ, ಇದೇ ಶನಿವಾರವೂ ಸಹ ಬೆಂಗಳೂರಿನ ಕ್ರಿಯೇಟಿವ್ ಅಸೋಸಿಯೇಷನ್ ಹಾಗೂ ಕ್ರಿಯೇಟಿವ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜು.29ರ ಶನಿವಾರ ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕ್ರಿಯೇಟಿವ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ಅಧ್ಯಕ್ಷ ಸೋಗಾಲ ಪುಟ್ಟಸ್ವಾಮಿ ತಿಳಿಸಿದ್ದಾರೆ.

ನಗರದ ಒಕ್ಕಲಿಗ ಸಾರ್ವಜನಿಕ ವಿದ್ಯಾಸಂಸ್ಥೆ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 25ವರ್ಷದ ಹಿಂದೆ ತಾಲೂಕಿನವರೆಲ್ಲಾ ಸೇರಿ ಆರಂಭಿಸಿದ ಕ್ರಿಯೇಟಿವ್ ಅಸೋಷಿಯೇಷನ್ ಹಲವಾರು ಸಾಮಾಜಿಕ ಕಾರ್ಯಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿ ಚನ್ನಪಟ್ಟಣದಲ್ಲಿ ಬೃಹತ್ ಆರೋಗ್ಯ ಶಿಬಿರ ಏರ್ಪಡಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಅಸೋಸಿಯೇಷನ್‍ನಿಂದ ಹಲವಾರು ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಇದಲ್ಲದೇ ಹಲವಾರು ಶಾಲೆಗಳಿಗೆ ಕಂಪ್ಯೂಟರ್ ಸೇರಿದಂತೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಸಾಮಗ್ರಿಗಳನ್ನು ನೀಡಲಾಗಿದೆ. ಈ ಹಿಂದೆಯೂ ಸಹ ಚನ್ನಪಟ್ಟಣದ ಅರಳಾಳುಸಂದ್ರ ಗ್ರಾಮ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿದ್ದು, ಸಂಸ್ಥೆ ಸದಾ ಸಾಮಾಜಿಕ ಕಾರ್ಯಗಳಲ್ಲಿ ಮಂಚೂಣಿಯಲ್ಲಿದೆ ಎಂದು ತಿಳಿಸಿದರು.

ಅಸೋಸಿಯೇಷನ್ ಗೌರವಾಧ್ಯಕ್ಷ ರವಿರಾಜೆ ಅರಸ್ ಮಾತನಾಡಿ, ಆರೋಗ್ಯ ಶಿಬಿರದಲ್ಲಿ ನರರೋಗ, ಮಧುಮೇಹ, ಮೂಳೆ ವಿಭಾಗ, ಕಣ್ಣಿನ ವಿಭಾಗ, ಸ್ತ್ರೀರೋಗ, ಕ್ಯಾನ್ಸರ್ ಸೇರಿದಂತೆ ಎಲ್ಲಾ ರೋಗಳಿಗೆ ಸಂಬಂಧಿಸಿದ ಪರೀಕ್ಷೆ ನಡೆಸಲಾಗುವುದು. ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಮಹಾ ವಿಶ್ವವಿದ್ಯಾಲಯ, ಸಪ್ತಗಿರಿ ವೈದ್ಯಕೀಯ ಮಹಾ ವಿದ್ಯಾಲಯ, ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆಯ ನುರಿತ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಆರೋಗ್ಯ ಶಿಬಿರದಲ್ಲಿ ಪರೀಕ್ಷೆ ನಡೆಸಿದ ನಂತರ ಅಗತ್ಯ ಕಂಡುಬಂದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು. ಕಣ್ಣಿನ ದೋಷವಿರುವವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗುವುದು. ಪರೀಕ್ಷೆ ನಡೆಸಿದ ನಂತರ ರೋಗಿಗಳಲ್ಲಿ ಎಲ್ಲಾ ಔಷಧವನ್ನು ಉಚಿತವಾಗಿ ವಿತರಿಸಲಾಗುವುದು. ಯಾರಿಂದಲೂ ಯಾವುದೇ ರೀತಿಯ ಶುಲ್ಕ ಪಡೆಯದೇ ಎಲ್ಲ ಅಗತ್ಯ ಚಿಕಿತ್ಸೆಯನ್ನು ಉಚಿತವಾಗಿ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಕ್ರಿಯೇಟಿವ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ಉಪಾಧ್ಯಕ್ಷ ಹಾಗೂ ಒಕ್ಕಲಿಗರ ಸಂಘದ ನಿರ್ದೇಶಕ ಚಕ್ಕರೆ ವೆಂಕಟರಾಮೇಗೌಡ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ 25ವರ್ಷದ ಹಿಂದೆ ಬೆಂಗಳೂರಿನಲ್ಲಿ ಕ್ರಿಯೇಟಿವ್ ಅಸೋಸಿಯೇಷನ್ ಆರಂಭಿಸಲಾಯಿತು. ಅಂದಿನಿಂದ ಸಂಸ್ಥೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಇಂದಿನ ದಿನಮಾನದಲ್ಲಿ ವೈದ್ಯಕೀಯ ವೆಚ್ಚಗಳು ದುಬಾರಿಯಾಗಿದ್ದು, ಇದಕ್ಕೆ ಹೆದರಿ ಜನ ತಮ್ಮ ನೋವುಗಳನ್ನು ನುಂಗಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಹೆಚ್ಚು ಹೆಚ್ಚು ಆರೋಗ್ಯ ಶಿಬಿರಗಳನ್ನು ಎಲ್ಲೆಡೆ ಏರ್ಪಡಿಸಲಾಗುತ್ತಿದ್ದು, ಜನ ಇದನ್ನು ಸದುಪಯೋಗಪಡಿಸಿಕೊಂಡು ತಮ್ಮ ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ರಿಯೇಟಿವ್ ಅಸೋಸಿಯೇಷನ್ ಅಧ್ಯಕ್ಷ ಶಿವನಂಜಯ್ಯ, ಕಾರ್ಯದರ್ಶಿ ಸಂದೇಶ್ ಆರ್. ಶೆಟ್ಟಿ, ಉಪಾಧ್ಯಕ್ಷರಾದ ಚಂದ್ರಶೇಖರ್, ಕೊಮಾರಿಗೌಡ, ವರದರಾಜು, ಗಂಗಾಧರ್, ಲೋಕೇಶ್ ಇತರರು ಉಪಸ್ಥಿತರಿದ್ದರು.

Share & Spread
error: Content is protected !!