ವಿವಿಧ ಕ್ಷೇತ್ರಗಳ ಸಾಧಕರಿಗೆ ‘ರಾಮನಗರ ರತ್ನ’ ಪ್ರಶಸ್ತಿ ಪ್ರದಾನ*
*‘ಕಲೆಗಿದೆ ಸಾಮಾಜಿಕ ಬದಲಾವಣೆ ಶಕ್ತಿ’*
ರಾಮನಗರ:ಜಾನಪದ ಕಲೆಗಳಿಗೆ ಸಾಮಾಜಿಕ ಬದಲಾವಣೆಯನ್ನು ತರುವ ಶಕ್ತಿ ಇದೆ. ಆ ಕಾರಣಕ್ಕಾಗಿಯೇ, ನಮ್ಮ ಹಿರಿಯರು ಕಲೆಗಳನ್ನು ಬಳಸಿಕೊಂಡು ಸಮಾಜದಲ್ಲಿ ಸುಧಾರಣೆ ತರುವ ಕೆಲಸಗಳನ್ನು ಮಾಡಿದರು’ ಎಂದು ಸಾಹಿತಿ ಹಾಗೂ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಸತೀಶ ಕುಮಾರ್ ಹೊಸಮನಿ ಅಭಿಪ್ರಾಯಪಟ್ಟರು.
ಸಾಹಿತಿ ಜಿ.ಪಿ. ರಾಜರತ್ನಂ ಸ್ಮರಣಾರ್ಥ ನಿಸರ್ಗ ಟ್ರಸ್ಟ್ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಪದ ಉತ್ಸವ ಹಾಗೂ ರಾಮನಗರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಲೆಗಳು ಕೇವಲ ಮನಸ್ಸಿಗೆ ಮುದ ನೀಡಿ, ಒತ್ತಡವನ್ನು ತಗ್ಗಿಸುವ ಸಾಧನವಷ್ಟೇ ಅಲ್ಲ. ಸಮಾಜ ಮತ್ತು ಸಮುದಾಯಗಳ ಸಂಸ್ಕೃತಿ ಮತ್ತು ಪರಂಪರೆಯ ಕುರುಹುಗಳಾಗಿ ಕಲೆಗಳು ಜನಮಾನಸದಲ್ಲಿ ನೆಲೆಸಿವೆ. ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲೆಗಳು ಅವನತಿ ಅಂಚಿನಲ್ಲಿವೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.
ಸಿನಿಮಾ ನಿರ್ದೇಶಕ ಓಂ ಸಾಯಿಪ್ರಕಾಶ್ ಮಾತನಾಡಿ, ‘ಮನುಷ್ಯ ಯಾವಾಗಲೂ ಮತ್ತೊಬ್ಬರಿಗೆ ಸ್ಪೂರ್ತಿಯಾಗಿರಬೇಕು. ಮದರ್ ತೆರೇಸಾ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಸೇರಿದಂತೆ ಹಲವರು ತಮ್ಮ ಬದುಕಿನುದ್ದಕ್ಕೂ ಮತ್ತೊಬ್ಬರಿಗೆ ಪ್ರೇರಣೆಯಾಗುವ ಕೆಲಸಗಳನ್ನು ಮಾಡಿದರು. ಅಂತಹವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು’ ಎಂದು ತಿಳಿಸಿದರು.
‘ಮನುಷ್ಯ ಸಮಾಜ ನನಗೇನು ಕೊಟ್ಟಿತು ಎಂದು ಪ್ರಶ್ನಿಸುವುದರ ಬದಲು, ನನ್ನ ಬೆಳವಣಿಗೆಗೆ ಇಷ್ಟೆಲ್ಲವನ್ನೂ ನೀಡಿರುವ ಸಮಾಜಕ್ಕೆ ನಾನೇನು ಮಾಡಿದ್ದೇನೆ ಎಂದು ಪ್ರಶ್ನಿಸಿಕೊಳ್ಳಬೇಕು. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಾಜ ಸೇವೆ ಮಾಡಬೇಕು. ಇದರಿಂದ, ಒಳ್ಳೆಯದು ಮಾಡಿದೆನೆಂಬ ಆತ್ಮತೃಪ್ತಿ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ನಗರಸಭೆ ಸದಸ್ಯ ಕೆ. ಶೇಷಾದ್ರಿ (ಶಶಿ) ಮಾತನಾಡಿ, ‘ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಈ ಸಾಧಕರು ಹಲವು ವರ್ಷಗಳಿಂದ ತಮ್ಮ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಮಾಡಿಕೊಂಡು ಬಂದಿದ್ದಾರೆ. ಅವರನ್ನು ಗುರುತಿಸಿ, ಗೌರವಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಶೈಲಜಾ ಎಂ.ಜಿ, ಸಹ ಪ್ರಾಧ್ಯಾಪಕ ಡಾ. ರಾಜು ಗುಂಡಾಪುರ, ರಾಮನಗರ ಜಿಲ್ಲಾ ಎಸ್ಸಿ ಮತ್ತು ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹದೇವ ಸ್ವಾಮಿ, ಕೃಷ್ಣಸ್ಮೃತಿ ಕಲ್ಯಾಣ ಮಂಟಪದ ಮಾಲೀಕ ಕೃಷ್ಣಮೂರ್ತಿ ಇದ್ದರು.
ನಿಸರ್ಗ ಟ್ರಸ್ಟ್ ಕಾರ್ಯದರ್ಶಿ ಡಾ. ಅಂಕನಹಳ್ಳಿ ಪಾರ್ಥ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ವಿದ್ಯಾರ್ಥಿಗಳ ನೃತ್ಯ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು.
*ಪ್ರಶಸ್ತಿ ಪುರಸ್ಕೃತರು*
ಡಾ. ಸತೀಶ ಎಸ್. ಹೊಸಮನಿ (ಸಾಹಿತ್ಯ ಮತ್ತು ಸಮಾಜಸೇವೆ), ಡಾ. ರಾಜು ಆರ್.ಎಸ್ (ಚಲನಚಿತ್ರ ಮತ್ತು ಸಮಾಜಸೇವೆ), ಡಾ. ಎಂ.ಜಿ. ನಾಗರಾಜು (ಸಾಹಿತ್ಯ ಮತ್ತು ಶಾಸನ ಸಂಶೋಧನೆ), ಡಾ. ಕೆ.ಪಿ. ಹೆಗ್ಡೆ (ವೈದ್ಯಕೀಯ), ಡಾ. ರಾ.ಬಿ. ನಾಗರಾಜು (ಸಂಘಟನೆ), ಎಚ್.ವಿ. ಮೂರ್ತಿ (ರಂಗಭೂಮಿ), ದೊಡ್ಡಬಾಣಗೆರೆ ಮಾರಣ್ಣ (ಪತ್ರಿಕೋದ್ಯಮ), ಜೆ. ಶಾಂತಾಬಾಯಿ (ಸಮಾಜ ಸೇವೆ), ಶ್ರೀನಿವಾಸ್ (ಜನಪದ ಕ್ಷೇತ್ರ), ರೇಣುಕಾಪ್ರಸಾದ್ (ನೃತ್ಯ ಕ್ಷೇತ್ರ) ಹಾಗೂ ಮಂಜುಳಾ ಆರ್.ಎಸ್ (ಶಿಕ್ಷಣ ಕ್ಷೇತ್ರ) ಅವರಿಗೆ ಗಣ್ಯರು ‘ರಾಮನಗರ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.