ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಬಿಜೆಪಿ ಪಕ್ಷದ ಜೊತೆ ಮೈತ್ರಿಯಾಗಲಿ, ಮಹಾಘಟಬಂಧನ್ ವಿಷಯವಾಗಿ ಆಗಲಿ ನನಗೆ ಕಿಂಚಿತ್ತೂ ಗೊತ್ತಿಲ್ಲಾ, ನಾನೂ ಸಹ ಮಾಧ್ಯಮದ ಚರ್ಚೆಯನ್ನಷ್ಟೇ ನೋಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಅವರು
ತಾಲ್ಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸಂಜೀವಿನಿ ಭವನ ಹಾಗೂ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎನ್‌ಡಿಎ ಜೊತೆಗೆ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ, ಮಾಧ್ಯಮಗಳಲ್ಲಿ ಚರ್ಚೆಯನ್ನು ನಾನು ನೋಡಿದ್ದೇನೆ.
ನಾನು ದೆಹಲಿಗೆ ಹೋಗುತ್ತಿದ್ದೇನೆ ಎಂಬ ಸುದ್ದಿ ಯಾಕೆ ಚರ್ಚೆ ಆಗುತ್ತಿಧ ಗೊತ್ತಿಲ್ಲ ಎಂದರು.
ನನಗೆ ಮಹಾಘಟಬಂಧನದ ಆಹ್ವಾನವೂ ಇಲ್ಲ, ಎನ್.ಡಿ.ಎ ಆಹ್ವಾನವೂ ಇಲ್ಲ:*
ನನಗೆ ಯಾವುದೇ ಪಕ್ಷದಿಂದ ಆಹ್ವಾನ ಬಂದಿಲ್ಲ, ಆಹ್ವಾನ ಬಂದಾಗ ಅದನ್ನು ನೋಡೋಣ ಎಂದರು.
ಆಹ್ವಾನ ಬಂದ್ರೆ ಏನು ಮಾಡಬೇಕು ಅಂತ ಕೂತು ತೀರ್ಮಾನ ಮಾಡುತ್ತೇವೆ ಎಂದರು. ಹೆಚ್ಡಿಕೆಗೆ ವಿಪಕ್ಷ ನಾಯಕನ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನಾಡಿನ ಜನತೆ ನನ್ನನ್ನು ಸ್ಥಾನಮಾನದಿಂದ ಗುರುತಿಸಿಲ್ಲ.ನಾನು ಎಲ್ಲೇ ಹೋದರೂ ನನ್ನ ವೈಯಕ್ತಿಕ ವರ್ಚಸ್ಸಿನಿಂದ ಗುರುತಿಸುತ್ತಾರೆ. ಆ ಸ್ಥಾನಮಾನಗಳಿಂದ ವರ್ಚಸ್ಸು ಗಳಿಸಬೇಕಿಲ್ಲ.
ನಾನೂ ಈಗಲೂ ಬಿಜೆಪಿ ನಾಯಕರಲ್ಲಿ ಮನವಿ ಮಾಡುತ್ತೇನೆ, 65 ಮಂದಿ ನಿಮ್ಮ ಪಕ್ಷದಿಂದ ಗೆದ್ದಿದ್ದಾರೆ, ಹಲವು ಹಿರಿಯ ನಾಯಕರಿದ್ದಾರೆ.
ಒಬ್ಬ ಸಮರ್ಥ ನಾಯಕರನ್ನು ವಿಪಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ.
ದೆಹಲಿಯ ನಾಯಕರಿಗೂ ನಾನು ಇದನ್ನೇ ಮನವಿ ಮಾಡುತ್ತೇನೆ.
ಕಾಲಹರಣ ಮಾಡಬೇಡಿ ಅಂತ ಹೇಳುತ್ತೇನೆ. ನಮ್ಮ ಪಕ್ಷದಿಂದ ಯಾವುದೇ ಡಿಮ್ಯಾಂಡ್ ಇಲ್ಲ, ಮಾತುಕತೆಯೂ ಆಗಿಲ್ಲ ಎಂದರು. ಜೆಡಿಎಸ್ 19 ಸ್ಥಾನ ಗೆದ್ದಿದ್ದೇನೆ, ಬಿಜೆಪಿ 65 ಸ್ಥಾನ ಗೆದ್ದಿದೆ. ಅಲ್ಲಿಯೂ ಮಾಜಿ ಸಿಎಂ ಸೇರಿ ಅನೇಕ ಮಾಜಿ ಮಂತ್ರಿಗಳಿದ್ದಾರೆ. ಹಾಗಾಗಿ ಸೂಕ್ತ ವ್ಯಕ್ತಿ ಆಯ್ಕೆ ಮಾಡಿಕೊಳ್ಳಿ.
ಬಿಜೆಪಿ ಪಕ್ಷದ ಮಾಜಿ ಮುಖ್ಯಮಂತ್ರಿಗಳಿಗೆ ಹೆಚ್ಡಿಕೆ ಸಲಹೆ ನೀಡಿದರು.
ನನಗೆ ರಾಷ್ಟ್ರ ರಾಜಕಾರಣದ ಒಲವಿಲ್ಲ:*
ರಾಷ್ಟ್ರ ರಾಜಕಾರಣಕ್ಕೆ ಹೆಚ್ಡಿಕೆ ಒಲವು ತೋರಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನನಗೆ ಯಾವ ರಾಷ್ಟ್ರ ರಾಜಕಾರಣದ ಬಗ್ಗೆಯೂ ಒಲವಿಲ್ಲ. ಕೇಂದ್ರದಲ್ಲಿ ಮಂತ್ರಿ ಮಾಡುವ ವಿಚಾರವೂ ಗೊತ್ತಿಲ್ಲ. ಯಾವ ವಿರೋಧ ಪಕ್ಷದ ಸ್ಥಾನವೂ ಬೇಕಿಲ್ಲ.ಒಬ್ಬ ಸಾಮಾನ್ಯ ವಿಧಾನಸಭಾ ಸದಸ್ಯನಾಗಿ ರಾಜ್ಯದ ಜನರ ಪರವಾಗಿ ಕೆಲಸ ಮಾಡುತ್ತೇನೆ ಎಂದರು.
ನನಗೆ ಮಹಾಘಟಬಂಧನ್ *ಕಾರ್ಯಕ್ರಮ ಪ್ರಮುಖ ಅಲ್ಲ:*
ಕಳೆದ ಎರಡು ತಿಂಗಳಿಂದ 42 ರೈತ ಕುಟುಂಬಗಳ ಆತ್ಮಹತ್ಯೆ ಆಗಿದೆ. ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಬಗ್ಗೆ ಚಿಂತನೆ ಇಲ್ಲ.
ಈ ಬಜೆಟ್ ನಲ್ಲೂ ಸಹ ಐದು ಗ್ಯಾರಂಟಿಗಳ ಹೆಸರಲ್ಲಿ ಕೃಷಿ ಇಲಾಖೆ ಸಂಪೂರ್ಣ ಕಡೆಗಣಿಸಿದ್ದಾರೆ.
ರೈತನ ಆತ್ಮಸ್ಥೈರ್ಯ ತುಂಬುವ ಕೆಲಸ ಸರ್ಕಾರ ಮಾಡಲಿಲ್ಲ.
ಈಗಿನ ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ ಎಂದು ಕಿಡಿಕಾರಿದರು. ಹಿಂದಿನ ಸರ್ಕಾರದ ಆರೋಪ ಮಾಡುತಿದ್ದ ಇವರಿಗೆ ಪ್ರಾರಂಭಿಕ ಹಂತದಲ್ಲೇ ಆರ್ಥಿಕ ಶಿಸ್ತು ಇಲ್ಲ.
ರಾಜ್ಯದ ಜನತೆ ಮೇಲೆ ಸಾಲದ ಹೊರೆ ಹೇರುತ್ತಿದ್ದಾರೆ.
ಐದು ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಕೆಲಸ ಪ್ರಾರಂಭ ಮಾಡಿದ್ದಾರೆ. ಐದು ಗ್ಯಾರಂಟಿಗಳ ಜೊತೆ ಇನ್ನೂ ಐದು ಗ್ಯಾರಂಟಿ ಕೊಡಿ ಸರ್ಕಾರದಲ್ಲಿ ದುಡ್ಡಿನ ಕೊರತೆ ಇಲ್ಲ. ನಾಡಿನ ಜನತೆ ಎಷ್ಟೇ ಕಷ್ಟ ಇದ್ದರೂ ಸರ್ಕಾರದ ಖಜಾನೆ ತುಂಬಿಸುತ್ತಿದ್ದಾರೆ. ಆದರೆ ಆ ಖಜಾನೆಯ ಹಣ ದರೋಡೆ ಆಗುತ್ತಿದೆ ಎಂದರು.
ಮಹಾನ್ ನಾಯಕರನ್ನ ಏರ್ಪೋರ್ಟ್ ನಿಂದ ತಾಜ್ ವೆಸ್ಟೆಂಡ್ ವರೆಗೆ ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಆ ವಿಜೃಂಭಣೆಯನ್ನು ರೈತರ ಸಮಾಧಿ ಮೇಲೆ ಮಾಡುತ್ತಿದ್ದಾರೆ. ರೈತರ ಸಮಾಧಿ ಮೇಲೆ ಮಹಾ ಘಟಬಂಧನ್ ವಿಜೃಂಭಣೆ ನಡೆಯುತ್ತಿದೆ ಎಂದರು. ರೈತ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸ ಆಗಿಲ್ಲ.ಬರೀ ಗ್ಯಾರಂಟಿ ಕಥೆ ಹೇಳಿಕೊಂಡೇ ಹೊರಟಿದ್ದಾರೆ ಎಂದು ಕಿಡಿ ಕಾರಿದರು.
*ಇವರ ಸಾಧನೆ ವರ್ಗಾವಣೆ ದಂಧೆ:*
ಇವರ ಒಂದೂವರೆ ತಿಂಗಳ ಸಾಧನೆ ವರ್ಗಾವಣೆ ದಂಧೆ. ದೇಶದ ಇತಿಹಾಸದಲ್ಲೇ ವರ್ಗಾವಣೆ ದಂಧೆಯಲ್ಲಿ ಹೆಚ್ಚು ಲೂಟಿ ಮಾಡಿದ್ದಾರೆ.
ಕೋಟ್ಯಾಂತರ ರೂ ಲೂಟಿ ಮಾಡಲಾಗುತ್ತಿದೆ. ಆ ಅಧಿಕಾರಿಗಳು ಲಂಚ ಕೊಟ್ಟು ಬಂದು ಜನರ ಹತ್ತಿರ ಲೂಟಿ ಮಾಡುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
*ನನಗೆ ಯಾರ ಮೇಲೂ ಸಾಫ್ಟ್ ಕಾರ್ನರ್ ಇಲ್ಲ;* ಬಿಜೆಪಿ ಪಕ್ಷದ ಬಗ್ಗೆ ಹೆಚ್ಡಿಕೆ ಸಾಫ್ಟ್ ಕಾರ್ನರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ನನಗೆ ಯಾರ ಬಗ್ಗೆಯೂ ಸಾಫ್ಟ್ ಕಾರ್ನರ್ ಇಲ್ಲ. ನಾಡಿನ ಜನತೆ ಕಷ್ಟದ ಬಗ್ಗೆ ಸಾಫ್ಟ್ ಕಾರ್ನರ್ ಇದೆ. ಪಕ್ಷಗಳ ಬಗ್ಗೆ ಸಾಫ್ಟ್ ಕಾರ್ನರ್ ಇಟ್ಕೊಂಡು ಏನು ಮಾಡಲಿ ಎಂದರು.