ದಸರಾ ಆನೆ ಬಲರಾಮನಿಗೆ ಗುಂಡೇಟು, ಜಮೀನು ಮಾಲೀಕನ ಬಂಧನ

ಕೊಡಗು: ದಸರಾ ಆನೆ ಬಲರಾಮನನ್ನು ಕಾಡಾನೆ ಎಂದು ತಪ್ಪು ತಿಳಿದು ಗುಂಡು ಹಾರಿಸಿದ್ದ ಖಾಸಗಿ ಜಮೀನಿನ ಮಾಲೀಕನನ್ನು ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆಗೆ ಗುರುವಾರ ರಾತ್ರಿ ಜಮೀನಿನ ಮಾಲಕ ಸುರೇಶ್ ಎಂಬಾತ ಗುಂಡು ಹಾರಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಆತನನ್ನು ವಶಕ್ಕೆ ಪಡೆದಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ಬಲರಾಮ ಹೋಗಿದ್ದು, ಸಿಟ್ಟಿಗೆದ್ದ ಮಾಲೀಕ ಸುರೇಶ್ ಗುಂಡು ಹಾರಿಸಿದ್ದ. ಆನೆಯ ತೊಡೆ ಬಳಿ ಗುಂಡು ಹೊಕ್ಕಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೃತ್ಯ ಎಸಗಿದ್ದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಒಂಟಿ ನಳಿಕೆಯ ಕೋವಿ ಹಾಗೂ ಕಾಡತೂಸುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

Share & Spread
error: Content is protected !!