ಮುಂಬೈ: ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಕೊಟ್ಟಿರೋ ಹೊಡೆತ ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ಆಘಾತ ನೀಡಿದೆ. ಪಕ್ಷದ 57 ಶಾಸಕರಲ್ಲಿ ತನಗೆ 34 ಶಾಸಕರ ಬೆಂಬಲವಿದೆ ಎಂದು ಹೇಳುವ ಮೂಲಕ ಶಿಂಧೆ ತಮ್ಮ ಮಹತ್ವಾಕಾಂಕ್ಷೆಗಳನ್ನು ಸ್ಪಷ್ಟಪಡಿಸಿದ್ದಾರೆ. ಅವರೊಂದಿಗೆ ಸೇರಲು ಇನ್ನೂ ನಾಲ್ವರು ವಿಮಾನ ಹತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಮಹಾರಾಷ್ಟ್ರ ಸರ್ಕಾರದಲ್ಲಿನ ಬೆಳವಣಿಗೆಗಳು ರೋಚಕ ತಿರುವು ಪಡೆಯುತ್ತಿವೆ.
ಬಂಡಾಯಗಾರ ಏಕನಾಥ್ ಶಿಂಧೆ ತಮ್ಮ ಪಕ್ಷವೇ ನಿಜವಾದ ಶಿವಸೇನೆ ಎಂದು ಬಿಂಬಿಸಿ 34 ಶಾಸಕರೊಂದಿಗೆ ನಿರ್ಣಯ ಅಂಗೀಕರಿಸಿದ್ದಾರೆ. ಶಿವಸೇನಾ ಶಾಸಕ ಸುನೀಲ್ ಪ್ರಭು ಅವರನ್ನು ಮುಖ್ಯ ಸಚೇತಕ ಸ್ಥಾನದಿಂದ ತೆಗೆದುಹಾಕಿ, ಭರತ್ ಗೊಗಾವಾಲೆ ಅವರನ್ನು ಹೊಸ ಮುಖ್ಯ ಸಚೇತಕರನ್ನಾಗಿ ನೇಮಿಸಿದ್ದಾರೆ.
ಅಲ್ಲದೆ ಶಾಸಕಾಂಗ ಪಕ್ಷದ ನಾಯಕರಾಗಿ ಶಿಂಧೆ ಅವರನ್ನು ಆಯ್ಕೆ ಮಾಡಲಾಗಿದೆ. 34 ಶಾಸಕರು ಸಹಿ ಮಾಡಿದ ಪತ್ರವನ್ನು ಇಂದು ಮಧ್ಯಾಹ್ನ ರಾಜ್ಯಪಾಲರಿಗೆ ಕಳುಹಿಸಿದ್ದು, ಏಕನಾಥ್ ಶಿಂಧೆ ಅವರನ್ನು ತಮ್ಮ ನಾಯಕ ಎಂದು ಘೋಷಿಸಲಾಗಿದೆ. ಮುಖ್ಯಮಂತ್ರಿ ಠಾಕ್ರೆ ಅವರು ಇಂದು ಸಂಜೆ ಕರೆದಿರುವ ತುರ್ತು ಶಾಸಕಾಂಗ ಪಕ್ಷದ ಸಭೆಯನ್ನು ಕಾನೂನುಬಾಹಿರ ಎಂದು ಶಿಂಧೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಉಲ್ಬಣಗೊಳ್ಳುತ್ತಿರುವ ಬಿಕ್ಕಟ್ಟಿನ ಮಧ್ಯೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಂದ ಸಾರ್ವಜನಿಕ ಭಾಷಣವನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.
ಸಿಎಂ ಉದ್ಧವ್ ಠಾಕ್ರೆಯವರ ಪ್ರತಿನಿಧಿಗಳು ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆದರೆ ಅವರು ರಾಜಿ ಸಂಧಾನಕ್ಕೆ ಒಪ್ಪಿಲ್ಲ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶಿಂಧೆ ಅವರ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.