ಸಿಆರ್‌ಝಡ್ ವ್ಯಾಪ್ತಿಯ ನದಿಗಳ ಸಂಗ್ರಹಿತ ಮರಳು ಮಾರಾಟಕ್ಕೆ ಎನ್‌ಜಿಟಿ ನಿಷೇಧ!

ಉಡುಪಿ: ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯ ನದಿಗಳ ಮರಳು ದಿಬ್ಬಗಳನ್ನು ತೆರವುಗೊಳಿಸುವ ವೇಳೆ ಸಂಗ್ರಹಿಸಿದ ಮರಳನ್ನು ಮಾರಾಟ ಮಾಡುವಂತಿಲ್ಲ ಎಂದು ಚೈನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪೀಠ ಬುಧವಾರ ಮಹತ್ವದ ಆದೇಶ ನೀಡಿದೆ.

ಮರಳು ದಿಬ್ಬಗಳಿಂದ ಸಂಗ್ರಹಿಸಿದ ಮರಳನ್ನು ತೀರಾ ಕೆಳಮಟ್ಟದಲ್ಲಿರುವ ನದಿ ತಳವನ್ನು ಎತ್ತರಿಸಲು, ನದಿದಡಗಳನ್ನು ಬಲಿಷ್ಠಗೊಳಿಸಲು ಅಥವಾ ಬೀಚ್‌ಗಳಲ್ಲಿ ಬೇಕಿದ್ದರೆ ಬಳಸಬಹುದಾಗಿದೆ ಎಂದು ಚೆನ್ನೈನ ದಕ್ಷಿಣ ವಲಯದ ಇಬ್ಬರು ಸದಸ್ಯರ ಪೀಠ ತೀರ್ಪಿನಲ್ಲಿ ತಿಳಿಸಿದೆ.

ಮರಳುಗಾರಿಕೆ ನಡೆಯುತ್ತಿರುವ ಪ್ರದೇಶಗಳ ಜನರ ಬವಣೆಯಿಂದ ಬೇಸತ್ತು, ಇಲ್ಲಿ ನಡೆಯುತ್ತಿರುವ ಕಾನೂನಿನ ಉಲ್ಲಂಘನೆಯಿಂದ ಆಕ್ರೋಶಿತರಾಗಿ ಬ್ರಹ್ಮಾವರ ತಾಲೂಕು ಬೈಕಾಡಿ ಗ್ರಾಮದ ಭದ್ರಗಿರಿಯ ಉದಯ ಸುವರ್ಣ ಹಾಗೂ ಕಲ್ಯಾಣಪುರದ ದಿನೇಶ್ ಕುಂದರ್ ಎಂಬವರು ಎರಡನೇ ಬಾರಿಗೆ ಹಸಿರು ಪೀಠಕ್ಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ರಾಮಕೃಷ್ಣನ್ ಹಾಗೂ ವಿಷಯತಜ್ಞ ಸದಸ್ಯ ಡಾ.ಸತ್ಯಗೋಪಾಲ ಕೊರಾಲ್‌ಪತಿ ಅವರನ್ನೊಳಗೊಂಡ ಪೀಠ ಈ ತೀರ್ಪನ್ನು ನೀಡಿದೆ.

ಸಿಆರ್‌ಝಡ್ ವ್ಯಾಪ್ತಿಯ ನದಿಗಳ ಮರಳನ್ನು ಕೇವಲ ಪರವಾನಿಗೆ ಪಡೆದವರು ಅಥವಾ ಅವರ ಕುಟುಂಬಿಕರು ಮಾತ್ರ ತೆಗೆಯಬೇಕು. ಮರಳನ್ನು ತೆಗೆಯಲು ಸಾಂಪ್ರದಾಯಿಕ ಪದ್ಧತಿಯನ್ನು ಮಾತ್ರ ಅವಲಂಬಿಸಬೇಕು. ಇದರಲ್ಲಿ ಯಾವುದೇ ಉಪಗುತ್ತಿಗೆದಾರರಿಗಾಗಲೀ,  ಹೊರಗಿನ ಕಾರ್ಮಿಕರಿಗಾಗಲೀ ಅವಕಾಶವನ್ನೇ ನೀಡಬಾರದು ಎಂದು ಪೀಠ  ಸ್ಪಷ್ಟವಾಗಿ ಆದೇಶಿಸಿದೆ.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಈವರೆಗೆ ಹೊರತೆಗೆಯಲಾದ ಮರಳಿನ ಪ್ರಮಾಣವನ್ನು ನೋಡಿದಾಗ, ಸಾಂಪ್ರದಾಯಿಕ ಪದ್ಧತಿಯಂತೆ ಮಾನವನ ಬಳಕೆಯಿಂದ ಮಾತ್ರ ಇಷ್ಟೊಂದು ಪ್ರಮಾಣದ ಮರಳು ತೆಗೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮರಳು ತೆಗೆಯಲು ಯಾವುದೇ ವಿಧದ ಯಂತ್ರಗಳನ್ನು ಬಳಸುವಂತಿಲ್ಲ ಎಂದೂ ಪೀಠ ವಿಶೇಷ ಒತ್ತಿನೊಂದಿಗೆ ತಿಳಿಸಿದೆ.

ಉಡುಪಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಗಳ ಪ್ರಕಾರ, ಉಡುಪಿ ಜಿಲ್ಲೆಯ ಸಿಆರ್‌ಝಡ್‌ನಲ್ಲಿ ಈ ಹಿಂದೆ ಗುರುತಿಸಲಾದ 23 ಮರಳು ಬಾರ್‌ಗಳನ್ನು ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಎಸ್‌ಸಿಜೆಡ್‌ಎಂಎ) ಅನುಮೋದಿಸಿದೆ. ಆದರೆ, ಕುಂದಾಪುರದಲ್ಲಿ ನಾಲ್ಕು ಮರಳುಗಾರಿಕೆಗೆ ಅನುಮತಿ ರದ್ದುಗೊಂಡಿದ್ದು, ಉಳಿದವು ಉಡುಪಿ ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ.

ಎನ್‌ಜಿಟಿ ಆದೇಶ ಕುರಿತು ಪ್ರತಿಕ್ರಿಯೆ ನೀಡಿರುವ ಎಂದು ಉಡುಪಿ ಡಿಸಿ ಕೂರ್ಮಾರಾವ್ ಎಂ ಅವರು, ಜಿಲ್ಲಾಡಳಿತವು ಎನ್‌ಜಿಟಿಯ ಆದೇಶದ ಪ್ರತಿಯನ್ನು ಪಡೆದ ನಂತರ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸಂದೀಪ್ ಮಾಹಿತಿ ನೀಡಿ, ಸಿಆರ್‌ಝಡ್ ಅಲ್ಲದ ಪ್ರದೇಶದಲ್ಲಿ ಮೂರು ಮರಳು ಬ್ಲಾಕ್‌ಗಳಿವೆ – ಎರಡು ಹಳ್ನಾಡು ಗ್ರಾಮದಲ್ಲಿ ಮತ್ತು ಒಂದು ಜಿಲ್ಲೆಯ ಅಂಪಾರು ಗ್ರಾಮದಲ್ಲಿದೆ ಎಂದು ತಿಳಿಸಿದ್ದಾರೆ.

ಪರಿಸರ ಹೋರಾಟಗಾರ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ (ಎನ್‌ಇಸಿಎಫ್) ಸಂಚಾಲಕ ಶಶಿಧರ್ ಶೆಟ್ಟಿ ಅವರು ಮಾತನಾಡಿ, ಎನ್‌ಜಿಟಿ ಆದೇಶ ಶ್ಲಾಘನೀಯವಾದದ್ದು. ಆದೇಶದಿಂದ ಮೀನುಗಾರಿಕಾ ದೋಣಿಗಳ ಸಂಚಾರ ಮಾರ್ಗವನ್ನು ತೆರವುಗೊಳಿಸುವ ನೆಪದಲ್ಲಿ ಪರಿಸರವನ್ನು ಹಾಳು ಮಾಡುವುದು ಮತ್ತು ಮರಳು ಲೂಟಿ ಮಾಡುವುದು ಇನ್ನು ಮುಂದೆ ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಪ್ರಕರಣದ ಕುರಿತು ವಾದ ಮಂಡಿಸಿ ಗೆದ್ದಿದ್ದಕ್ಕೆ ವಕೀಲ ರಂಜನ್ ಶೆಟ್ಟಿಯವರನ್ನು ಅಭಿನಂದಿಸಿದ್ದಾರೆ.

Share & Spread
error: Content is protected !!