ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು 57 ರಾಜ್ಯಸಭಾ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಗುರುವಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ಜೂನ್ 10ರಂದು ಮತದಾನ ಪ್ರಕ್ರಿಯೆ ನಡೆದರೆ, ಅಂದೇ ಮತ ಎಣಿಕೆ ಸಹ ನಡೆಯಲಿದೆ.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಜೈ ರಾಮ್ ರಮೇಶ್, ಕೆ.ಸಿ.ರಾಮಮೂರ್ತಿ, ಆಸ್ಕರ್ ಫರ್ನಾಂಡಿಸ್ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸದಸ್ಯತ್ವ ಜೂನ್ 6ರಂದು ಕೊನೆಗೊಳ್ಳಲಿದೆ. ಈ ಸ್ಥಾನಗಳಿಗೆ ಇಂದು ಚುನಾವಣೆ ಘೋಷಣೆಯಾಗಿದೆ.
ಕರ್ನಾಟಕ ಅಷ್ಟೇ ಅಲ್ಲದೆ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಢ, ಮಧ್ಯಪ್ರದೇಶ, ತಮಿಳುನಾಡು, ಒಡಿಶಾ, ಮಹಾರಾಷ್ಟ್ರ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಬಿಹಾರ, ಜಾರ್ಖಂಡ್ ಮತ್ತು ಹರಿಯಾಣದ ಖಾಲಿ ಸ್ಥಾನಗಳಿಗೂ ಜೂನ್ 10 ರಂದು ಚುನಾವಣೆ ನಡೆಯಲಿದೆ.
ಒಟ್ಟು 15 ರಾಜ್ಯಗಳ 57 ಸಂಸದರ ಸದಸ್ಯತ್ವ ಜೂನ್ 26 ರಿಂದ ಆಗಸ್ಟ್ 1ರ ಮಧ್ಯಾವಧಿಯಲ್ಲಿ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತೆರುವಾಗಲಿರುವ 57 ಸ್ಥಾನಗಳಿಗೆ ಜೂನ್ 10 ಶುಕ್ರವಾರದಂದು ಚುನಾವಣೆ ನಡೆಯಲಿದೆ.
ಮೇ 24 ರಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಜೂನ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜೂನ್ 3 ಕೊನೆಯ ದಿನವಾಗಿದೆ. ಜೂನ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.