ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಅವರು ರಾಜ್ಯದ ನೆಲ ಜಲ ವಿಷಯಗಳಲ್ಲಿ ರಾಜ್ಯ ಹಾಗೂ ಕನ್ನಡ ಜನರ ಪರ ಗಟ್ಟಿ ನಿಲುವು ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರು: ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಅನಂತ್ ಕುಮಾರ್ ಅವರು ರಾಜ್ಯದ ನೆಲ ಜಲ ವಿಷಯಗಳಲ್ಲಿ ರಾಜ್ಯ ಹಾಗೂ ಕನ್ನಡ ಜನರ ಪರ ಗಟ್ಟಿ ನಿಲುವು ಹೊಂದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಬೆಂಗಳೂರಿನ ಜಯನಗರ ಬಡಾವಣೆಯ ಅನಂತ್ ಕುಮಾರ್ ಅವರ ಕಚೇರಿಯಲ್ಲಿ ಅನಂತ ಪ್ರೇರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಮೆಟ್ರೋ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗ, ಕೃಷ್ಣಾ ಮೇಲ್ದಂಡೆ ಯೋಜನೆ, ಕಾವೇರಿ ಜಲ ವಿಷಯದಲ್ಲಿ ಬಿಗಿ ನಿಲುವಿನಿಂದ ರಾಜ್ಯಕ್ಕೆ ಪರಿಹಾರ ಕೊಡಿಸುವಲ್ಲಿ ಅನಂತಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಕೇಂದ್ರದಿಂದ ಆಗಬೇಕಾದ ಬೆಂಗಳೂರಿನ ಹಾಗೂ ರಾಜ್ಯದ ಎಲ್ಲ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕಾರ ನೀಡಿದ್ದರು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದ ಅವರ ಸ್ಥಾನಮಾನಗಳು ನಮ್ಮೊಂದಿಗಿನ ಸ್ನೇಹವನ್ನು ಬದಲಾಯಿಸಿರಲಿಲ್ಲ. ಕೃಷ್ಣಾ ಟ್ರಿಬ್ಯುನಲ್ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯ ಸಮ್ಮತವಾಗಿ ಕರ್ನಾಟಕದ ಪರವಾಗಿ ಹೋರಾಟ ಮಾಡಿ ಕರ್ನಾಟಕದ ಹಿತ ಕಾಪಾಡಿದ್ದಾರೆ. ಆ ಮೂಲಕ ರಾಜ್ಯದ ಆಪತ್ತನ್ನು ಅವರು ತಪ್ಪಿಸಿದರು ಎಂದರು.
ಸಾರ್ವಜನಿಕ ಹೋರಾಟದ ಅತ್ಯಂತ ಆತ್ಮೀಯ ಸಂಗಾತಿ:
ನನ್ನ ಸಾರ್ವಜನಿಕ ಹೋರಾಟದ ಅತ್ಯಂತ ಆತ್ಮೀಯ ಸಂಗಾತಿ, ಜನಮೆಚ್ಚಿದ ನಾಯಕರಾದ ಅನಂತಕುಮಾರ್ ಅವರು ಎಲ್ಲರಿಗೂ ಪ್ರೇರಣೆ. ಕನಾಟಕ ಎಂದು ಕೂಡ ಅನಂತಕುಮಾರ್ ಅವರನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ಬದುಕಿನಲ್ಲಿ ಅವರು ಅನಂತವಾಗಿದ್ದಾರೆ ಎಂದು ತಿಳಿಸಿದರು.
ಅನಂತಕುಮಾರ್ ಒಬ್ಬ ನೈಜ ನಾಯಕ
ಅನಂತಕುಮಾರ್ ಒಬ್ಬ ನೈಜ ನಾಯಕ. ಯಾವುದೇ ಸ್ಥಿತಿಯಲ್ಲಿ, ಹಂತದಲ್ಲಿ ನಾಯಕತ್ವವನ್ನು ವಹಿಸುವ ನೈಜ ನಾಯಕ ಎನಿಸಿಕೊಳ್ಳುತ್ತಾರೆ. ವಿದ್ಯಾರ್ಥಿ ದೆಸೆಯಿಂದ ವಿದ್ಯಾರ್ಥಿ ಆಂದೋಲನದಲ್ಲಿ, ಮುಂದೆ ಎಬಿವಿಪಿ ಸಂಘಟನೆಗಳಲ್ಲಿ ನಾಯಕತ್ವ ವಹಿಸಿದರು. ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ನಾಯಕತ್ವ ವಹಿಸಿದರು. ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಬಲಪಡಿಸುವುದರಲ್ಲಿ ನಾಯಕತ್ವ ವಹಿಸಿದರು. ಹತ್ತು ಜನ ಇದ್ದಾಗಲೂ, ಹತ್ತು ಲಕ್ಷ ಜನ ಇದ್ದಾಗಲೂ ನಾಯಕತ್ವ ವಹಿಸಿದ್ದರು. ಬಹಳ ಅಪರೂಪದ ನಾಯಕತ್ವ ಅವರದ್ದು ಎಂದರು.
ಆತ್ಮೀಯ ಒಡನಾಟ
ಯಾವ ಉದ್ದೇಶಕ್ಕಾಗಿ ಬದುಕು ನಡೆಸಿದರೊ ಅದಕ್ಕಾಗಿ ಅವರು ಹೋರಾಟವನ್ನು ಮಾಡಿದವರು ಅನಂತ ಕುಮಾರ್. ಚಿಕ್ಕಂದಿನಿಂದಲೂ ನಮ್ಮಿಬ್ಬರ ಸ್ನೇಹವಿತ್ತು. ಅವರು ನನ್ನ ಸಹಪಾಠಿಗಳಾಗಿದ್ದರು. ನಮ್ಮ ಮಧ್ಯೆ ಆತ್ಮೀಯ ಒಡನಾಟವಿತ್ತು. ನಮ್ಮ ನಡುವೆ ಯಾರೇ ಕಾಲೇಜಿಗೆ ತಡವಾಗಿ ಹೋದರೂ ಒಬ್ಬರು ಬೆಂಚನ್ನು ಕಾಯ್ದಿರಿಸುತ್ತಿದ್ದೆವು. ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ವಿದ್ಯಾರ್ಥಿ ಕ್ರಿಯಾ ಸಮಿತಿ ರೂಪಿಸಿ ಅನಂತ ಕುಮಾರ್ ಅವರನ್ನು ಕಾರ್ಯದರ್ಶಿಗಳನ್ನಾಗಿ ಮಾಡಿದೆವು. ತುರ್ತು ಪರಿಸ್ಥಿತಿ ವಿರುದ್ಧ ದೊಡ್ಡ ಪ್ರಮಾಣದ ಹೋರಾಟ ಮಾಡುವಂತಿರಲಿಲ್ಲ. ಆದರೆ ಅಂಥ ಸಂದರ್ಭದಲ್ಲಿಯೂ ನೂರಾರು ವಿದ್ಯಾರ್ಥಿಗಳನ್ನು ಸೇರಿಸಿ ದೊಡ್ಡ ಹೋರಾಟ ಮಾಡಲಾಯಿತು. ಲಾಠಿ ಚಾರ್ಜ್ ಆಗಿ ಪೊಲೀಸರು ಅನಂತ ಕುಮಾರ್ ಅವರನ್ನು ಬಂಧಿಸಿದರು. ಇದರಿಂದಾಗಿ ಒಂದು ವರ್ಷ ವಿದ್ಯಾರ್ಥಿ ಜೀವನ ವ್ಯರ್ಥವಾಯಿತು. ನಂತರ ಕಾನೂನಿನ ವಿದ್ಯಾರ್ಥಿಯಾದರು. ಆ ಸಂದರ್ಭಗಳಲ್ಲಿ ಅವರಲ್ಲಿ ನಾಯಕತ್ವದ ವಿಚಾರ ಹಾಗೂ ಗುಣಗಳನ್ನು ಅವರಲ್ಲಿ ಕಂಡೆ. ದೂರದೃಷ್ಟಿ ಇದ್ದ ನಾಯಕರು ಅನಂತ ಕುಮಾರ್ ಎಂದರು.
ಪ್ರೀತಿಯ ಗಾಳ
ಗಂಭೀರ ರಾಜಕಾರಣದ ಜೊತೆಗೆ ಹಾಸ್ಯ ಪ್ರಜ್ಞೆಯೂ ಅವರಲ್ಲಿತ್ತು. 30- 40 ವರ್ಷ ಒಟ್ಟಿಗಿದ್ದರೂ, ಒಂದು ದಿನವೂ ದುಃಖಿತರಾಗಿ ಅಥವಾ ಚಿಂತಾಕ್ರಾಂತರಾಗಿ ಎಂದೂ ಇರಲಿಲ್ಲ. ಎಂಥಾ ಸ್ಥಿತಿ ಎದುರಾದರೂ ಸ್ಥಿತಪ್ರಜ್ಞತೆಯಿಂದ ಎಲ್ಲವನ್ನೂ ಎದುರಿಸುತ್ತಿದ್ದರು. ನಗುನಗುತ್ತಾ ಇರುತ್ತಿದ್ದರು. ಸಮಸ್ಯೆಗಳನ್ನು ಬಗೆಹರಿಸಲು ಏನು ಮಾಡಬೇಕೋ ಅದನ್ನು ಮಾಡಬೇಕು ಎನ್ನುತ್ತಿದ್ದರು . ಇನ್ನೊಬ್ಬರಿಗೆ ಊಟ ಹಾಕಿಸುವುದರಲ್ಲಿ ಅವರಿಗೆ ಬಹಳ ಆಸಕ್ತಿ. ನನ್ನ ಬಗ್ಗೆ ಬಹಳ ಪ್ರೀತಿ. ಅವರ ಪ್ರೀತಿಯ ಗಾಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಂತ್ರಿ ಸ್ಥಾನ ನಮ್ಮ ಸಂಬಂಧವನ್ನು ಎಂದೂ ಬದಲಾಯಿಸಲಿಲ್ಲ ಎಂದು ಸ್ಮರಿಸಿದರು.
ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ಸಾಮಾಜಿಕ ಚಟುವಟಿಕೆಗಳು, ಅದಮ್ಯಚೇತನದ ಕೆಲಸ, ಸಸ್ಯಾಗ್ರಹ ಕಾರ್ಯಕ್ರಮ ಎಲ್ಲವೂ ಮುಂದುವರೆದಿರುವುದು ಶ್ಲಾಘನೀಯ. ಅನಂತಕುಮಾರ್ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಎಲ್ಲ ಸಹಕಾರ ನೀಡುತ್ತದೆ ಎಂದರು.