ಅಮರನಾಥ ಯಾತ್ರೆ ಮಾರ್ಗದಲ್ಲಿ ಉಗ್ರ ದಾಳಿಗೆ ಸಂಚು: 3 ಉಗ್ರರ ಹತ್ಯೆ, ಹಿಜ್ಬುಲ್ ನ ಹಿರಿಯ ಉಗ್ರ ಬಲಿ!

ಅಮರನಾಥ ಯಾತ್ರೆಯ ಪ್ರಮುಖ ಮಾರ್ಗವಾದ ಅನಂತನಾಗ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

ಶ್ರೀನಗರ: ಅಮರನಾಥ ಯಾತ್ರೆಯ ಪ್ರಮುಖ ಮಾರ್ಗವಾದ ಅನಂತನಾಗ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

ಈ ಮಾರ್ಗದಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಇಂದಿನ ಎನ್‌ಕೌಂಟರ್ ದೊಡ್ಡ ಯಶಸ್ಸು ಎಂದು ಪೊಲೀಸರು ಕರೆದಿದ್ದಾರೆ.

ಇಂದು ಗುಂಡಿಕ್ಕಿ ಕೊಲ್ಲಲಾದ ಮೂವರು ಭಯೋತ್ಪಾದಕರ ಪೈಕಿ ಓರ್ವ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ ಸೇರಿದವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಶ್ರಫ್ ಮೋಲ್ವಿ(ಹಿಜ್ಬುಲ್ ಮುಜಾಹಿದ್ದೀನಿ ಭಯೋತ್ಪಾದಕ ಸಂಘಟನೆಯ ಅತ್ಯಂತ ಹಳೆಯ ಭಯೋತ್ಪಾದಕರಲ್ಲಿ ಒಬ್ಬರು) ಜೊತೆಗೆ ಇಬ್ಬರು ಭಯೋತ್ಪಾದಕರ ಹತ್ಯೆಯಾಗಿದೆ.  ಯಾತ್ರಾ ಮಾರ್ಗದಲ್ಲಿ ಯಶಸ್ವಿ ಕಾರ್ಯಾಚರಣೆಯು ನಮಗೆ ದೊಡ್ಡ ಯಶಸ್ಸು” ಎಂದು ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಪಹಲ್ಗಾಮ್‌ನ ಕಾಡಿನಲ್ಲಿ ಭಯೋತ್ಪಾದಕರ ಉಪಸ್ಥಿತಿಯ ಕುರಿತು ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಭದ್ರತಾ ಪಡೆಗಳು ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು, ಅಡಗಿರುವ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣವಾದ ಪಹಲ್ಗಾಮ್ ಅಮರನಾಥ ಯಾತ್ರೆಯ ಮೂಲ ಶಿಬಿರಗಳಲ್ಲಿ ಒಂದಾಗಿ ಕಾರ್ಯನಿರ್ವಹಿಸುತ್ತದೆ.  ಈ ಯಾತ್ರೆ ಎರಡು ವರ್ಷಗಳ ನಂತರ ಜೂನ್ 30 ರಿಂದ ಪ್ರಾರಂಭವಾಗಲಿದೆ.

Share & Spread
error: Content is protected !!