ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಭಾಗಿಯಾಗಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸುತ್ತಿದೆ.
ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಭಾಗಿಯಾಗಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸುತ್ತಿದೆ.
ಪಿಎಸ್ ಐ ನೇಮಕಾತಿ ಹಗರಣ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ಅಶ್ವತ್ಥ ಅವರ ಸಂಬಂಧಿಕರೊಬ್ಬರು ಹಗರಣ ಪ್ರಮುಖ ರೂವಾರಿಯಾಗಿದ್ದಾರೆ, ಈ ಸಂಬಂಧ ತಮ್ಮ ಬಳಿ ಸಾಕ್ಷ್ಯಾಧಾರವಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತದ್ದಾರೆ.
ಆದರೆ ರಾಜಕೀಯವಾಗಿ ಹೇಳುವುದಾದರೇ ಇದು ರಾಮನಗರಕ್ಕಾಗಿ ಇಬ್ಬರು ಪ್ರಭಾವಿ ಒಕ್ಕಲಿಗ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಅಶ್ವತ್ಥ ನಾರಾಯಣ ನಡೆಸುತ್ತಿರುವ ಹಣಾಹಣಿ ಎಂದು ತಿಳಿದು ಬಂದಿದೆ.
ಈ ವರ್ಷದ ಜನವರಿಯಲ್ಲಿ ರಾಮನಗರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿದ್ದ ವೇದಿಕೆಯಲ್ಲೇ ಸಾರ್ವಜನಿಕವಾಗಿ ಡಿಕೆ ಶಿ ಸಹೋದರರ ವಿರುದ್ಧ ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿದ್ದರು. ಈ ವೇಳೆಸುರೇಶ್ ಅವರಿಂದ ಮೈಕ್ ಕಸಿದುಕೊಂಡಿದ್ದರು.
ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆ ಪಿಎಸ್ ಐ ಹಗರಣವು ಅಶ್ವತ್ಱ ನಾರಾಯಣ ರಾಜಕೀಯ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕುವ ವರನ್ನು ರಾಜಕೀಯವಾಗಿ ಹಳ್ಳ ಹಿಡಿಸುತ್ತಾರೆ ಎಂಬ ಪುಕಾರಿಗೆ ಅಶ್ವತ್ಥ ನಾರಾಯಣ ಪ್ರಕರಣ ಮತ್ತಷ್ಟು ಪುಷ್ಠಿ ನೀಡುತ್ತಿದೆ.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಎದುರು ಹಾಕಿಕೊಂಡಿದ್ದ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ಗೆ ಕೊಟ್ಟಿದ್ದ ಜಲಸಂಪನ್ಮೂಲ ಖಾತೆ ಮತ್ತು ಡಿಕೆಶಿಗೆ ನೀಡಿದ್ದ ಕಚೇರಿ ಪಡೆದುಕೊಂಡಿದ್ದರು, ಅದಾದರ ನಂತರ ಅಶ್ಲೀಲ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡಬೇಕಾಯಿತು.
ಇನ್ನೂ ಕೆಎಸ್ ಈಶ್ವರಪ್ಪ ಕೂಡ ಡಿಕೆ ಶಿವಕುಮಾರ್ ವಿರುದ್ಧ ತೊಡೆ ತಟ್ಟಿ ನಿಂತಿದ್ದರು, ಜೊತೆಗೆ ಡಿಕೆಶಿಗೆ ಬಹಿರಂಗ ಬೆದರಿಕೆ ಕೂಡ ಹಾಕಿದ್ದರು. ಹಗರಣಗಳನ್ನು ಬಹಿರಂಗ ಗೊಳಿಸುವುದಾಗಿ ಈಶ್ವರಪ್ಪ ಎಚ್ಚರಿಕೆ ನೀಡಿದ್ದರು. ಬಿಜೆಪಿ ನಾಯಕರೇ ಮಾಹಿತಿಗಳನ್ನು ಮಾಧ್ಯಮದವರಿಗೆ ನೀಡುತ್ತಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಇದು ಅಧಿಕಾರಕ್ಕಾಗಿ ಬಿಜೆಪಿ ಒಕ್ಕಲಿಗ ನಾಯಕರ ನಡುವೆ ನಡೆಯುತ್ತಿರುವ ಸಮರ ಎಂದೂ ಕೂಡ ಹೇಳಲಾಗುತ್ತಿದೆ. ಸಿಟಿ ರವಿ. ಶೋಭಾ ಕರಂದ್ಲಾಜೆ, ಆರ್. ಅಶೋಕ್ , ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರಿಗಿಂತ ಪಕ್ಷದಲ್ಲಿ ಹಿರಿಯರಾಗಿದ್ದಾರೆ.