ಇಂದು ಕೆಜಿಎಫ್ ನ ಪರಿಸ್ಥಿತಿ ಸಂಪೂರ್ಣ ಭಿನ್ನ. ಕೋಲಾರದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಕೆಜಿಎಫ್ ನಲ್ಲಿ ಸಾರ್ವಜನಿಕರಿಗೆ ಓಡಾಡಲು ಬಸ್ಸುಗಳ ಸೌಲಭ್ಯವಿಲ್ಲ. ಹತ್ತಿರದಲ್ಲಿ ಸಣ್ಣದೊಂದು ರೈಲು ನಿಲ್ದಾಣವಿದೆ, ಆದರೆ ಸಂಪರ್ಕ ಸರಿಯಾಗಿಲ್ಲ, ಜನರಿಗೆ ಸರಿಯಾಗಿ ಉಪಯೋಗವಾಗುತ್ತಿಲ್ಲ.
ಕೆಜಿಎಫ್/ಕೋಲಾರ: ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಸಮಯದಲ್ಲಿ ಕೋಲಾರ ಚಿನ್ನದ ಗಣಿ (KGF) ಪ್ರದೇಶ ನಿಜಕ್ಕೂ ಚಿನ್ನದಂತೆ ಕಂಗೊಳಿಸುತ್ತಿತ್ತು. ಆ ಸಮಯದಲ್ಲಿ ಮೂಲಭೂತ ಸೌಕರ್ಯಗಳು ಮಾತ್ರವಲ್ಲದೆ ಕೆಜಿಎಫ್ ನಲ್ಲಿ ದೊಡ್ಡ ದೊಡ್ಡ ಬಂಗಲೆಗಳು, ಸ್ಪೋರ್ಟ್ಸ್ ಕ್ಲಬ್ ಗಳು, ಕ್ಲಬ್ ಹೌಸ್ ಗಳು, ಜಿಮ್ಕಾನ, ಉತ್ತಮ ಶೈಕ್ಷಣಿಕ ಕೇಂದ್ರಗಳು ಹೀಗೆ ಒಂದು ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿ ಇರುವ ಸೌಲಭ್ಯಗಳೆಲ್ಲವೂ ಕೋಲಾರದ ಕೆಜಿಎಫ್ ನಲ್ಲಿದ್ದವು. ಇದನ್ನು ಕಿರು ಇಂಗ್ಲೆಂಡ್ ಎಂದು ಕರೆಯುತ್ತಿದ್ದರು.
ಆದರೆ ಇಂದು ಕೆಜಿಎಫ್ ನ ಪರಿಸ್ಥಿತಿ ಸಂಪೂರ್ಣ ಭಿನ್ನ. ಕೋಲಾರದಿಂದ 30 ಕಿಲೋ ಮೀಟರ್ ದೂರದಲ್ಲಿರುವ ಕೆಜಿಎಫ್ ನಲ್ಲಿ ಸಾರ್ವಜನಿಕರಿಗೆ ಓಡಾಡಲು ಬಸ್ಸುಗಳ ಸೌಲಭ್ಯವಿಲ್ಲ. ಹತ್ತಿರದಲ್ಲಿ ಸಣ್ಣದೊಂದು ರೈಲು ನಿಲ್ದಾಣವಿದೆ, ಆದರೆ ಸಂಪರ್ಕ ಸರಿಯಾಗಿಲ್ಲ, ಜನರಿಗೆ ಸರಿಯಾಗಿ ಉಪಯೋಗವಾಗುತ್ತಿಲ್ಲ. ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ನಲ್ಲಿ (BGML) ಕೆಲಸ ಮಾಡುತ್ತಿರುವ ಅಲ್ಬರ್ಟ್ ಎಂಬಾತ ಕೆಜಿಎಫ್ ನಲ್ಲಿ ವಾಸಿಸುತ್ತಿದ್ದು, ಇಲ್ಲಿಗೆ ಸಾರ್ವಜನಿಕ ಸಾರಿಗೆ ಬಸ್ಸು ಸೌಲಭ್ಯವೇ ಇಲ್ಲ ಎಂದು ನೊಂದು ಹೇಳುತ್ತಾರೆ.
ಹತ್ತಿರದ ಬಸ್ ನಿಲ್ದಾಣಕ್ಕೆ ಹೋಗಲು ಆಟೋರಿಕ್ಷಾದಲ್ಲಿ ಹೋಗಬೇಕು. ಅದು 8 ಕಿಲೋ ಮೀಟರ್ ದೂರ ಸಾಗಬೇಕು. ಆಟೋಗೆ 60 ರೂಪಾಯಿ ಕೊಡಬೇಕು. ಬಸ್ಸು ಸೌಲಭ್ಯವಿದ್ದರೆ ನಮಗೆ ಅಷ್ಟೊಂದು ಖರ್ಚಾಗುವುದಿಲ್ಲ. ಬೆಂಗಳೂರಿಗೆ ಹೋಗಲು ರೈಲು ಸೌಲಭ್ಯವಿದೆ, ಆದರೆ ಪ್ರತಿಬಾರಿ ರೈಲಿನಲ್ಲಿ ಪ್ರಯಾಣಿಸಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಕೆಜಿಎಫ್ ನ ಜನರ ಕಷ್ಟಗಳನ್ನು ಅವರು ವಿವರಿಸುತ್ತಾರೆ.
ಕೇವಲ ಸಾರಿಗೆ ಸೌಲಭ್ಯ ಮಾತ್ರವಲ್ಲದೆ ನೀರಿನ ಸೌಲಭ್ಯ ಕೂಡ ಕಳಪೆಯಾಗಿದೆ. ಇಲ್ಲಿನ ನಿವಾಸಿಗಳಿಗೆ ಪೈಪ್ ಮೂಲಕ ನೀರು ಸರಬರಾಜಾಗುತ್ತಿದ್ದು, ಅದು ಕುಡಿಯಲು ಮತ್ತು ಅಡುಗೆ ಬಳಕೆಗೆ ಯೋಗ್ಯವಾಗಿಲ್ಲ. ಖಾಸಗಿ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ. ಮೂರು ಮಡಕೆ ನೀರಿಗೆ 10 ರೂಪಾಯಿ ಕೊಡಬೇಕು. ಪ್ರತಿದಿನ ಕುಡಿಯುವ ನೀರಿಗೆ 20ರಿಂದ 30 ರೂಪಾಯಿ ಕೊಡಬೇಕು ಎನ್ನುತ್ತಾರೆ ಅಲ್ಬರ್ಟ್.
ದಿನಕ್ಕೆ 600 ರಿಂದ 700 ರೂಪಾಯಿ ನೀರು, ಸಾರಿಗೆ ವೆಚ್ಚವಾಗುತ್ತಿದ್ದು ನಮ್ಮಂಥ ಬಡವರಿಗೆ ಇದು ದೊಡ್ಡ ಮೊತ್ತ. ಖಾಸಗಿ ಟ್ಯಾಂಕರ್ ಗಳನ್ನು ತಪ್ಪಿಸಿಕೊಂಡರೆ 8 ಕಿಲೋ ಮೀಟರ್ ದೂರದಲ್ಲಿರುವ ಬನಗಿರಿ ಗ್ರಾಮಕ್ಕೆ ಹೋಗಿ ಅಲ್ಲಿಂದ ನೀರು ತರಬೇಕು, ಆರ್ ಒ ಘಟಕ ಕಳೆದ ಕೆಲ ತಿಂಗಳುಗಳಿಂದ ಕೆಲಸ ಮಾಡುತ್ತಿಲ್ಲ ಎನ್ನುತ್ತಾರೆ.
ಸ್ಥಗಿತಗೊಂಡ ಚಿನ್ನದ ಗಣಿ ಬಳಿ ಸಾವಿರಾರು ಮನೆಗಳು ಶಿಥಿಲಾವಸ್ಥೆಯಲ್ಲಿ: ಕೆಜಿಎಫ್ ಪಟ್ಟಣದಲ್ಲಿ ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದ ಈಗ ಕಾರ್ಯಸ್ಥಗಿತಗೊಂಡಿರುವ ನಿಷ್ಕ್ರಿಯ ಚಿನ್ನದ ಗಣಿಗಳ ಬಳಿ ಸಾವಿರಾರು ಸಣ್ಣಸಣ್ಣ ಮನೆಗಳಿವೆ. ಕೇವಲ ಶೀಟ್ ಛಾವಣಿಗಳನ್ನು ಹೊಂದಿರುವ, ಕಾಂಕ್ರೀಟ್ ಛಾವಣಿಗಳಿಲ್ಲದ ಈ ಕಳಪೆ ಮನೆಗಳಲ್ಲಿ ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಮಳೆಗಾಲ ಹಾಗೂ ಬೇಸಿಗೆಯಲ್ಲಿ ನಿವಾಸಿಗಳು ತೊಂದರೆ ಅನುಭವಿಸುತ್ತಾರೆ.
ಮಂಜುಳಾ ಎಂಬ ಮಹಿಳೆಯ ಪತಿ ಅಗಸ್ಟಿನ್ ಬಿಜಿಎಂಎಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಬೇರೆಲ್ಲಿಯೂ ಹೋಗದ ಕಾರಣ ಇಲ್ಲಿಯೇ ಇರುತ್ತೇವೆ ಎನ್ನುತ್ತಾರೆ. “ಮಳೆ ಬಂದಾಗ ಮನೆಯೊಳಗೆ ಸುರಿಯುತ್ತದೆ. ಬೇಸಿಗೆಯಲ್ಲಿ ಶೀಟ್ ಚಾವಣಿಯಿಂದಾಗಿ ವಿಪರೀತ ಬಿಸಿಯಾಗಿರುತ್ತದೆ ಎಂದು ಕಷ್ಟ ತೋಡಿಕೊಂಡರು.
ಚಿನ್ನದ ಗಣಿಗಳು ಚಾಲನೆಯಲ್ಲಿರುವಾಗ, ಕೆಜಿಎಫ್ ಶಿವಸಮುದ್ರ ನಿಲ್ದಾಣದಿಂದ ವಿದ್ಯುತ್ ಪಡೆಯುತ್ತಿತ್ತು, ಇದನ್ನು 1902 ರಲ್ಲಿ ನಿರ್ಮಿಸಿದಾಗ ಏಷ್ಯಾದ ಮೊದಲ ವಿದ್ಯುತ್ ಉತ್ಪಾದನಾ ಘಟಕವಾಗಿತ್ತು. ಆದರೆ ಇಂದು, ನಿವಾಸಿಗಳು ಆಗಾಗ್ಗೆ ವಿದ್ಯುತ್ ಕಡಿತವನ್ನು ಎದುರಿಸುತ್ತಿದ್ದಾರೆ. ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ 2001 ರಲ್ಲಿ ಮುಚ್ಚಿದಾಗ 3,500 ಉದ್ಯೋಗಿಗಳನ್ನು ಹೊಂದಿತ್ತು. ಅವರಲ್ಲಿ ಕೆಲವರು, ಅವರ ಕುಟುಂಬಗಳು ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಮೂಲ ಸೌಕರ್ಯಗಳನ್ನು ಸುಧಾರಿಸಿದರೆ ಕೆಜಿಎಫ್ ಕಳೆದುಹೋದ ವೈಭವವನ್ನು ಸ್ವಲ್ಪಮಟ್ಟಿಗೆ ಮರಳಿ ಪಡೆಯಬಹುದು ಎಂಬುದು ನಿವಾಸಿಗಳ ಅಭಿಮತ.
ನಟ ಯಶ್ ಅಭಿನಯದ ಕೆಜಿಎಫ್ (KGF chapter 1 and KGF chapter 2) ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ವಿಶ್ವಮಟ್ಟದಲ್ಲಿ ಜನಪ್ರಿಯತೆ ಗಳಿಸಿ ಸಾವಿರ ಕೋಟಿಗೂ ಅಧಿಕ ಗಳಿಸಿದೆ. ಆದರೆ ಅದೇ ಹೆಸರಿನ ಊರಿನ ಜನರ ಬವಣೆ ಕೇಳುವವರಿಲ್ಲ.