ನವದೆಹಲಿ: 90 ವರ್ಷದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಒಡಿಸ್ಸಿ ನೃತ್ಯಗಾರ ಗುರು ಮಾಯಧರ್ ರಾವುತ್ ಅವರನ್ನು ದೆಹಲಿಯ ಏಷ್ಯನ್ ಗೇಮ್ಸ್ ಗ್ರಾಮದಲ್ಲಿರುವ ಸರ್ಕಾರಿ ವಸತಿಗೃಹದಿಂದ ನಿನ್ನೆ ಹೊರಹಾಕಲಾಗಿದೆ. 2014 ರಲ್ಲೇ ವಸತಿಯನ್ನು ರದ್ದುಗೊಳಿಸಿದ್ದು, ಈಗಾಗಲೇ ನೋಟಿಸ್ ನೀಡಲಾಗಿತ್ತು ಎಂದು ಸರ್ಕಾರ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಕಲಾವಿದರು ಕೂಡ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಅವರು ಪ್ರಕರಣವನ್ನ ಸೋತರು. ಅವರಿಗೆ ವಸತಿಗೃಹ ಖಾಲಿ ಮಾಡಲು ಏಪ್ರಿಲ್ 25 ಕ್ಕೆ ಗಡುವು ನೀಡಲಾಯಿತು. 90 ವರ್ಷದ ಮಾಯಧರ್ ರಾವುತ್ ಅವರ ಗೃಹೋಪಯೋಗಿ ವಸ್ತುಗಳು ಮತ್ತು ಪದ್ಮಶ್ರೀ ಪ್ರಶಸ್ತಿ ಗೌರವ ಫಲಕವೂ ಬೀದಿಯಲ್ಲಿ ಬಿದ್ದಿತು.
ಮಾಯಧರ್ ರಾವುತ್ ಅವರ ಪುತ್ರಿ ಮಧುಮಿತಾ ರಾವುತ್ ಅವರು ಸರ್ಕಾರದ ನಡೆಯನ್ನ ಟೀಕಿಸುತ್ತಾ ಉಚ್ಚಾಟನೆ ಕಾನೂನುಬದ್ಧವಾಗಿದ್ದರೂ ಅದನ್ನು ಕಾರ್ಯಾಚರಣೆಗೊಳಿಸಿದ ಆಕ್ಷೇಪಾರ್ಹವಾಗಿದೆ ಎಂದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಕಲಾವಿದರಿಗೆ ಗೌರವ ಸಿಗುತ್ತಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಯಧರ್ ರಾವುತ್ ಅವರನ್ನು ಹೊರಹಾಕಿದ ನಂತರ, ಮೇ 2 ರೊಳಗೆ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಕೇಂದ್ರವು ಇತರ ಎಂಟು ಪ್ರಖ್ಯಾತ ಕಲಾವಿದರಿಗೆ ಸೂಚಿಸಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 28 ಕಲಾವಿದರ ಪೈಕಿ ಸುಮಾರು ಎಂಟು ಮಂದಿ ಇನ್ನೂ ಹಲವಾರು ಸೂಚನೆಗಳ ಹೊರತಾಗಿಯೂ ತಮ್ಮ ಸರ್ಕಾರಿ ವಸತಿಗಳಿಂದ ಹೊರಬರಲಿಲ್ಲ ಎಂದಿದ್ದಾರೆ. 1970 ರಲ್ಲಿ ಏಷ್ಯನ್ ಗೇಮ್ಸ್ ಗ್ರಾಮದಲ್ಲಿ ಬಾಡಿಗೆಗೆ ಸರ್ಕಾರಿ ಮನೆಗಳನ್ನು ಕಲಾವಿದರಿಗೆ ಮಂಜೂರು ಮಾಡಲಾಗಿತ್ತು.