ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿ ಐವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ದಿವ್ಯಾ ಹಾಗರಗಿ ಒಡೆತನದ ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶೀನಾಥ, ಈ ಶಾಲೆಯ ಶಿಕ್ಷಕಿಯರಾದ ಅರ್ಚನಾ, ಸುನಂದಾ ಹಾಗೂ ಅಭ್ಯರ್ಥಿ ಶಾಂತಿಬಾಯಿ ಬಂಧಿತರು. ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ಆರೋಪಿಗಳನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ್ದು, ಕಲಬುರಗಿಗೆ ಕರೆತರುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಪಿಎಸ್‌ಐ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗುತ್ತಿದ್ದಂತೆ ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ವ್ಯಾಕವಾಗಿ ಕೇಳಿ ಬಂತು. ಒಬ್ಬ ಅಭ್ಯರ್ಥಿಯ ಒಎಂಆರ್ ಶೀಟ್ ಸಹ ಬಹಿರಂಗಗೊಂಡಿತ್ತು. ರಾಜ್ಯ ಸರ್ಕಾರ ಇದರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಅಧಿಕಾರಿಗಳು ಇಲ್ಲಿಯ ಚೌಕ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುತ್ತಿದ್ದಂತೆ ದಿವ್ಯಾ ನಾಪತ್ತೆಯಾಗಿದ್ದರು. 15 ದಿನಗಳಿಂದ ಹುಡುಕಾಟ ನಡೆಸಿದರೂ ಅವರನ್ನು ಪತ್ತೆಹಚ್ಚಲು ಸಿಐಡಿಗೆ ಸಾಧ್ಯವಾಗಿರಲಿಲ್ಲ. ವಿರೋಧ ಪಕ್ಷಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಟೀಕಿಸುತ್ತಿದ್ದವು.
ಏತನ್ಮಧ್ಯೆ, ಸ್ಥಳೀಯ ನ್ಯಾಯಾಲಯ ದಿವ್ಯಾ ಹಾಗೂ ಇತರ ಆರು ಆರೋಪಿಗಳ ವಿರುದ್ಧ ಬಂಧನ ವಾರೆಂಟ್ ಹೊರಡಿಸಿತ್ತು. ವಾರದಲ್ಲಿ ಶರಣಾಗಲು ಸೂಚಿಸಿತ್ತು. ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವನ್ನೂ ನೀಡಿತ್ತು.
ದಿವ್ಯಾ ಕಿಂಗ್‌ಪಿನ್: ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಅಕ್ರಮ ನಡೆದಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ತನ್ನ ಶಾಲೆಯ ಶಿಕ್ಷಕಿಯರ ಮೂಲಕ ದಿವ್ಯಾ ಅವರು, ತಮಗೆ ಹಣ ನೀಡಿದ ಅಭ್ಯರ್ಥಿಗಳ ಒಎಂಆರ್ ಶೀಟ್ ತಿದ್ದಿಸಿದ್ದಾರೆ. ಅಲ್ಲದೇ ಅಫಜಲಪುರ ತಾಲ್ಲೂಕು ಸೊನ್ನದ ಆರ್.ಡಿ. ಪಾಟೀಲ ಸಹೋದರರು ಅಭ್ಯರ್ಥಿಗಳಿಂದ ಹಣ ಪಡೆದು ಬ್ಲೂಟೂತ್ ಮೂಲಕ ಅವರಿಗೆ ಉತ್ತರ ಹೇಳಿದ್ದಾರೆ ಎಂಬೆಲ್ಲ ಆರೋಪಗಳು ಇವೆ.
ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ವೀರೇಶ ನಿಡಗುಂದಾ ಎಂಬ ಅಭ್ಯರ್ಥಿಯ ಬಂಧನದೊಂದಿಗೆ ಅಕ್ರಮದ ಒಂದೊಂದೇ ವಿವರಗಳು ಬಿಚ್ಚಿಕೊಳ್ಳತೊಡಗಿದವು.
ದಿವ್ಯಾ ಹಾಗರಗಿ ಸೆರೆ ಸಿಕ್ಕಿದ್ದು ಹೇಗೆ?
ಕಲಬುರಗಿ: ಪಿಎಸ್ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಪ್ರಮುಖ ಆರೋಪಿ, ಇಲ್ಲಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಹಾಗೂ ತಂಡ ಸೆರೆ ಸಿಕ್ಕಿದ್ದು ಹೇಗೆ?
ಈ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಶಹಾಬಾದ್ ನಗರಸಭೆಯ ದ್ವಿತೀಯ ದರ್ಜೆ ಸಹಾಯಕಿ ಜ್ಯೋತಿ ಪಾಟೀಲ ಎಂಬುವವರನ್ನು ಗುರುವಾರ ವಶಕ್ಕೆ ಪಡೆದಿದ್ದರು. ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿನ ಕೇಂದ್ರದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿದ್ದ ಸೇಡಂನ ಶಾಂತಿಬಾಯಿ ಬಸ್ಯನಾಯ್ಕ ಎಂಬುವವರಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳುವಲ್ಲಿ ಸಹಕರಿಸಿದ ಆರೋಪ ಇವರ ಮೇಲಿತ್ತು.
ಜ್ಯೋತಿ ಪಾಟೀಲ ಅವರ ಮೊಬೈಲ್‌ಗೆ ಬಂದ ಹಾಗೂ ಅವರ ಮೊಬೈಲ್‌ನಿಂದ ಹೊರಹೋದ ಕರೆಗಳನ್ನು ಸಿಐಡಿ ತಂಡ ಜಾಲಾಡಿದಾಗ, ಆರೋಪಿಗಳಲ್ಲಿ ಒಬ್ಬರು ಜ್ಯೋತಿ ಪಾಟೀಲ ಅವರ ಜೊತೆ ಸಂಪರ್ಕದಲ್ಲಿ ಇರುವುದು ಗೊತ್ತಾಯಿತು. ಆ ಮೊಬೈಲ್ ಲೋಕೇಷನ್ ಪತ್ತೆ ಹಚ್ಚಿದ ತನಿಖಾಧಿಕಾರಿಗಳು, ಮಹಾರಾಷ್ಟ್ರದ ಪೊಲೀಸರ ನೆರವಿನೊಂದಿಗೆ ಆರೋಪಿಗಳನ್ನು ಶುಕ್ರವಾರ ನಸುಕಿನಲ್ಲಿ ಪುಣೆಯಲ್ಲಿ ಬಂಧಿಸಿದರು ಎಂದು ಮೂಲಗಳು ತಿಳಿಸಿವೆ. ಆರೋಪಿಗಳಲ್ಲಿ ಬಹುತೇಕರು ಈ ಅವಧಿಯಲ್ಲಿ ಮೊಬೈಲ್ ಬಳಸುತ್ತಿರಲಿಲ್ಲ. ಜ್ಯೋತಿ ಪಾಟೀಲ ಜೊತೆ ಸಂಪರ್ಕದಲ್ಲಿರುವ ಒಬ್ಬರು ಪದೇ ಪದೇ ಸಿಮ್ ಬದಲಿಸುತ್ತಿದ್ದರು. ಹೀಗಾಗಿ ಅವರ ಪತ್ತೆ ಕಷ್ಟಕರವಾಗಿತ್ತು ಎಂಬುದು ಸಿಐಡಿ ಮೂಲಗಳ ಮಾಹಿತಿ.