ಕಿಲ್ಕಾರಿ ಸೇವೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ

ರಾಮನಗರ :  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹ ಭಾಗಿತ್ವದಲ್ಲಿ ಕಾರ್ಯಗತಗೊಳಿಸಲಾಗಿರುವ ಕಿಲ್ಕಾರಿ ಮೊಬೈಲ್ ಕರೆ ಸೇವೆ ಕುರಿತು ಆಶಾ ಮೇಲ್ವಿಚಾರಕರಿಗೆ ಹಾಗೂ ಆಶಾ ಸುಗಮಕಾರರಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು.

ಡಾ. ಅಶ್ವಿನಿ, ರಾಜ್ಯ ಕಿಲ್ಕಾರಿ ಸಂಯೋಜಕಿ ತರಬೇತಿಗೆ ಚಾಲನೆ ನೀಡಿ ನಂತರ ಮಾತನಾಡುತ್ತಾ ಕಿಲ್ಕಾರಿಯು ಭಾರತದಲ್ಲಿ ಮೊಬೈಲ್ ಆಧಾರಿತ ಆರೋಗ್ಯ ಸೇವೆಯಾಗಿದ್ದು, ಗರ್ಭಿಣಿಯರು ಮತ್ತು ತಾಯಂದಿರಿಗೆ ಉಚಿತ ಆಡಿಯೋ ಸಂದೇಶಗಳನ್ನು ಒದಗಿಸುತ್ತದೆ. ಭಾರತದ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ೨೦೧೬ ರಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಿಲ್ಕಾರಿ ಕಾರ್ಯಕ್ರಮವು ಖಅಊ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮಹಿಳೆಯರಿಗೆ ವಾರಕ್ಕೆ ಒಂದು ಬಾರಿ (ಸಾಪ್ತಾಹಿಕ) ಆಡಿಯೋ ಸಂದೇಶಗಳನ್ನು ಕಳುಹಿಸುತ್ತದೆ. ಸಂದೇಶಗಳು ಪ್ರತಿ ತಾಯಿಯ ಗರ್ಭಾವಸ್ಥೆಯ ಅವಧಿಗೆ ಅನುಗುಣವಾಗಿದ್ದು ಗರ್ಭಿಣಿಗೆ ನಾಲ್ಕು ತಿಂಗಳಿನಿಂದ ಹಾಗೂ ಒಂದು ವರ್ಷದೊಳಗಿನ ಮಗುವಿರುವ ತಾಯಂದಿರಿಗೆ ದೂರವಾಣಿ ಸಂಖ್ಯೆ: ೦೧೨೪೪೪೫೧೬೬೦ ಇಂದ ಕರೆ ಬರುತ್ತದೆ. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಸಂದೇಶಗಳು ಗರ್ಭಾವಸ್ಥೆ, ಹೆರಿಗೆ ಮತ್ತು ಮಗುವಿನ ಆರೈಕೆಯಂತಹ ವಿಷಯಗಳನ್ನು ಒಳಗೊಂಡಿದೆ. ಕಾರ್ಯಕ್ರಮವು ಹೊಸ ಮತ್ತು ನಿರೀಕ್ಷಿತ ತಾಯಂದಿರನ್ನು ತಮ್ಮ ಶಿಶುಗಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಕಿಲ್ಕಾರಿಯಿಂದಾಗುವ ಪ್ರಯೋಜನಗಳ ಕುರಿತು ಮಾತನಾಡುತ್ತಾ ಕಾರ್ಯಕ್ರಮವು ತಾಯಂದಿರು ಮತ್ತು ಕುಟುಂಬಗಳು ತಮ್ಮ ಶಿಶುಗಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ. ಕುಟುಂಬಗಳು ಆರೋಗ್ಯ ಸೇವೆಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ದೈಹಿಕ ಭೇಟಿಗಳು ಕಷ್ಟಕರವಾದಾಗ ಕಿಲ್ಕಾರಿ ಸೇವೆ ವಿಶೇಷವಾಗಿ ಉಪಯುಕ್ತವಾಗಿದೆ. ಕಿಲ್ಕಾರಿ ಸಂದೇಶವನ್ನು ಮೂರುಬಾರಿ ಸತತವಾಗಿ ಕರೆಯ ಮುಖಾಂತರ ತಲುಪಿಸಲು ಪ್ರಯತ್ನಿಸಲಾಗುತ್ತದೆ. ಒಂದುವೇಳೆ ಕರೆಯನ್ನು ಸ್ವೀಕರಿಸಲು ಲಭ್ಯವಾಗದಿದ್ದಲ್ಲಿ ಅಥವಾ ಅದನ್ನು ತಪ್ಪಿಸಿಕೊಂಡರೆ ಅಥವಾ ಯಾವುದೇ ಸಂದೇಶವನ್ನು ಮತ್ತೆ ಕೇಳಲು ಬಯಸಿದರೆ ನಿಮ್ಮ ನೊಂದಾಯಿತ ಮೊಬೈಲ್ ನಂಬರಿನಿAದ ೧೪೪೨೩ ಗೆ ಕರೆ ಮಾಡುವ ಮೂಲಕ ಪುನಃ ಸಂದೇಶವನ್ನು ನೀವು ಕೇಳಬಹುದು. ಸತತವಾಗಿ ಮೂರುಬಾರಿ ಕರೆಯನ್ನು ಸ್ವೀಕರಿಸದಿದ್ದರೆ ಕಿಲ್ಕಾರಿ ಸೇವೆ ಸ್ಥಗಿತಗೊಳ್ಳುತ್ತದೆ ಎಂದು ತಿಳಿಸಿದರು.

 

ಡಾ. ರಾಜು.ವಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಮಾತನಾಡುತ್ತಾ ತಾಯಿ ಮರಣ ಮತ್ತು ಶಿಶುಮರಣವನ್ನು ತಡೆಗಟ್ಟುವ ಸಲುವಾಗಿ ಕಿಲ್ಕಾರಿ ಮೊಬೈಲ್ ಸೇವೆಯನ್ನು ಜಾರಿಗೆ ತರಲಾಗಿದ್ದು. ಗರ್ಭಿಣಿ ಮತ್ತು ತಾಯಂದಿರಿಗೆ ವಹಿಸಬೇಕಾದ ಕಾಳಜಿ, ಲಸಿಕೆ, ಪೌಷ್ಠಿಕ ಆಹಾರ ಹಾಗೂ ಇತರೆ ತಪಾಸಣೆಗೆ ಸಹಾಯಕವಾಗುವ ನಿಟ್ಟಿನಲ್ಲಿ ದೇಶದಾದ್ಯಂತ ಎಲ್ಲಾ ಭಾಷೆಗಳಲ್ಲಿ ಕಿಲ್ಕಾರಿ ಮೊಬೈಲ್ ಕರೆ ಆರಂಭಿಸಲಾಗಿದೆ. ಈ ಸೇವೆಯನ್ನು ಪಡೆಯಲು ಗರ್ಭಿಣಿ ಸ್ತ್ರೀ ಆರ್.ಸಿ.ಹೆಚ್. ಪೋರ್ಟಲ್‌ನಲ್ಲಿ ನೊಂದಣಿ ಸಮಯದಲ್ಲಿ ಗರ್ಭಿಣಿಯ ಅಥವಾ ಕುಟುಂಬದ ಸದಸ್ಯರ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗಿರುತ್ತದೆ. ಪ್ರತಿವಾರ ಕರೆ ಮಾಡುವ ಕಾಳಜಿವಹಿಸಲಾಗುವುದು. ಆದ್ದರಿಂದ ಪ್ರತಿಯೊಬ್ಬ ಗರ್ಭಿಣಿ ಹಾಗೂ ತಾಯಿಯು ಕಿಲ್ಕಾರಿ ಸೇವೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

 

ಶ್ರೀಮತಿ ಅರ್ಪಿತ, ಕೆ.ಜೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡುತ್ತಾ ಕಿಲ್ಕಾರಿ ಸೇವೆಯನ್ನು ಪಡೆಯುವಂತೆ ಗರ್ಭಿಣಿ ಸ್ತ್ರೀಯರಿಗೆ ಮತ್ತು ತಾಯಂದಿರಿಗೆ ಲಸಿಕಾ ಸತ್ರದ ವೇಳೆ, ತಪಾಸಣಾ ಸಮಯದಲ್ಲಿ, ಪಿ.ಎಂ.ಎಸ್.ಎಂ .ಎ ಕಾರ್ಯಕ್ರಮದಲ್ಲಿ, ತಾಯಂದಿರ ಸಭೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರಚಾರ ಕೈಗೊಂಡು ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ಸುದಾರಿಸುವಲ್ಲಿ ಕಿಲ್ಕಾರಿ ಸಹಾಯಕ ಎಂದು ತಿಳಿಸಿದರು.

 

ಈ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ.ಕೆ.ಜೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗೇಶ್, ಎಂ & ಇ ವ್ಯವಸ್ಥಾಪಕರಾದ ಶಿವಶಂಕರೆಗೌಡ, ಪ್ರಸಾದ್, ಗೀತಾ, ಆಶಾ ಮೇಲ್ವಿಚಾರಕರು ಹಾಗೂ ಆಶಾ ಸುಗಮಕಾರರು ಹಾಜರಿದ್ದರು.

Share & Spread
error: Content is protected !!