ರಾಮನಗರ, ಜ. 30
ವಿದ್ಯಾಥಿಗಳು ತಮ್ಮ ಅಮೂಲ್ಯವಾದ ಜೀವನದಲ್ಲಿ ಯೋಜಿತ ರೂಪದಲ್ಲಿ ಅಭ್ಯಾಸಮಾಡುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಅಕ್ಕ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಡಾ. ಶಿವಕುಮಾರ್ ಅವರು ತಿಳಿಸಿದರು.
ಅವರು ಜ. 30ರ ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಮುನ್ನೋಟ ಹಾಗೂ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮಗೆ ದೊರೆಯುವ ಸಮಯವನ್ನು ಯೋಜಿತವಾಗಿ ಬಳಸಿಕೊಂಡು ಪಠ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು, ಶಿಕ್ಷಣ ಪೂರ್ಣಗೊಳ್ಳುವ ವರೆಗೂ ಅದನ್ನು ಶ್ರದ್ದೆಯಿಂದ ಪಾಲಿಸುವುದನ್ನು ಅಳವಡಿಸಿಕೊಳ್ಳಬೇಕು, ಅದರಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. 15-25ರ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಕನಿಷ್ಠ ದಿನಕ್ಕೆ 6 ಗಂಟೆಗಳ ಕಾಲ ಅಭ್ಯಾಸ ಮಾಡುವುದನ್ನು ರೂಢಿಸಿಕೊಂಡಲ್ಲಿ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.
ಜ್ಞಾನವೇ ಶಕ್ತಿ. ಜ್ಞಾನಕ್ಕೆ ಜಗತ್ತಿನಾದ್ಯಂತ ಬೆಲೆಯಿದೆ ಆದರಿಂದ ನಿಮ್ಮ ಧನಾತ್ಮಕವಾದ ಆಸಕ್ತಿಯನ್ನು ಗುರುತಿಸಿಕೊಂಡು ಅದಕ್ಕೆ ಪೂರಕವಾದ ಸಿದ್ಧತೆ, ತರಬೇತಿ ಮತ್ತು ಮಾರ್ಗದರ್ಶನವನ್ನು ತೆಗೆದುಕೊಂಡಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಡೊಮಿನಿಕ್ ಅವರು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹೆಚ್ಚು ಉದ್ಯೋಗಾವಕಾಶಗಳಿರುವ ಸೇವಾವಲಯ, ಸ್ವ ಉದ್ಯೋಗ, ತಂತ್ರಜ್ಞಾನ ಮುಕ್ತ ಆವಿಷ್ಕಾರ ಜಾಗತಿಕ ತಂತ್ರಜ್ಞಾನ ಕ್ಷೇತ್ರಗಳತ್ತ ವಿದ್ಯಾರ್ಥಿಗಳು ತಮ್ಮ ಗಮನ ಹರಿಸುವುದರೊಂದಿಗೆ ತಮ್ಮ ಬದುಕನ್ನು ರೂಪಿಸಕೊಳ್ಳಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಲ್ಲಿ ಶಿಸ್ತು, ನೈತಿಕತೆ ಅತ್ಯಗತ್ಯ ಎಂದರು.
ಸಮಾರಂಭ ದಲ್ಲಿ ಎಲ್ಲಾ ವಿಭಾಗದ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.