ಚನ್ನಪಟ್ಟಣದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು ಕಸವನ್ನು ಸರಿಯಾದ ಸ್ಥಳದಲ್ಲಿ ವಿಲೇವಾರಿ ಮಾಡಲು ಅಧಿಕಾರಿ ವರ್ಗ ಅಸಮರ್ಪಕವಾಗಿದೆ. ಜೊತೆಗೆ ಜನ ಪ್ರತಿನಿಧಿಗಳು ಸಹ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ನಗರದಲ್ಲೆಲ್ಲ ಕಸದ ರಾಶಿ ತುಂಬಿದೆ, ಸಂಜೆ ವೇಳೆಯಲ್ಲಿ ಅದರ ದುರ್ವಾಸನೆ ತಾಳಲಾರದೆ ಜನ ಕಸದ ರಾಶಿಗೆ ಬೆಂಕಿ ಹಚ್ಚುತ್ತಿರುವುದು ಹೆಚ್ಚಾಗುತ್ತಿದೆ, ಇದರ ಹಿಂದೆ ಬರುತ್ತಿರುವ ದಟ್ಟವಾದ ಹೊಗೆಯು ಪರಿಸರದಲ್ಲಿ ಸೇರಿ ವಾಯು ಮಾಲಿನ್ಯವನ್ನು ಉಂಟು ಮಾಡುವುದರ ಜೊತೆಗೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ನಗರದಲ್ಲಿ ಇಷ್ಟೆಲ್ಲಾ ಸಮಸ್ಯೆ ಎದುರಾಗುತ್ತಿದ್ದರು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಮ್ಮ ಕರ್ತವ್ಯದ ಕಡೆಗೆ ಗಮನಕೊಡದೆ, ಅವರ ವೈಯುಕ್ತಿಕ ಒಳಜಗಳಕ್ಕೆ ಬಿದ್ದು, ಜನಸಾಮಾನ್ಯರನ್ನು ಬಲಿ ನೀಡುತ್ತಿರುವುದು ಅಕ್ಷರಶ: ಸತ್ಯವಾಗಿದೆ.
ಇತ್ತೀಚಿಗೆ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಇತರೇ ನಗರಸಭಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನಪ್ರತಿನಿಧಿಗಳ ಸಂಖ್ಯೆ ವಿರಳವಾಗಿರುವುದನ್ನು ನೋಡಿದರೆ ಸಾಕು ಇವರ ಕರ್ತವ್ಯದ ಬಗ್ಗೆ ಇರುವ ಬೇಜವಾಬ್ದಾರಿತನ ಎದ್ದು ಕಾಣುತ್ತದೆ.
ಜನರಿಗೆ ಅರಿವು ಮೂಡಿಸಬೇಕಾಗಿರುವ ಜನಪ್ರತಿನಿಧಿಗಳೇ ಹೀಗೆ ಕೋಳಿ ಜಗಳಕ್ಕೆ ನಿಂತರೆ ಜನಸಾಮಾನ್ಯರ ಪಾಡೇನು ಎಂಬುದೇ ಯಕ್ಷಪ್ರಶ್ನೆಯಾಗಿದೆ!!