*ಕುವೆಂಪು ನಗರದ ಒಂದನೇ ತಿರುವಿನಲ್ಲಿ ವಾಹನಗಳ ದಟ್ಟಣೆ*

ಚನ್ನಪಟ್ಟಣ:

ಪಟ್ಟಣದ ಕುವೆಂಪು ನಗರದ ಒಂದನೇ ತಿರುವು ಸದಾ ಜನಜಂಗುಳಿ ಮತ್ತು ವಾಹನಗಳ ದಟ್ಟಣೆಯಿಂದ ಕೂಡಿದ್ದು ಪಾದಚಾರಿಗಳಿಗೆ ಹಾಗೂ ಆ ಭಾಗದ ನಿವಾಸಿಗಳಿಗೆ ಕಿರಿಕಿರಿಯನ್ನುಂಟು ಮಾಡಿದೆ. ಸದಾ ಜನಜಂಗುಳಿಯಿಂದ ಗಿಜಿಗುಡುವ ಕುವೆಂಪುನಗರದ ಒಂದನೇ ತಿರುವಿನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸಾರ್ವಜನಿಕರಿಗೆ ಇನ್ನಿಲ್ಲದ ರೀತಿಯಲ್ಲಿ ಸಮಸ್ಯೆ ಭಾದಿಸ ತೊಡಗಿದೆ.

ನಗರದ ಪ್ರಮುಖ ಜನಸಂದಣಿ ಸ್ಥಳಗಳಲ್ಲಿ ಇದೂ ಸಹ ಒಂದಾಗಿದ್ದು, ಇಲ್ಲಿನ ರಸ್ತೆಯಲ್ಲಿ ಸಬ್ ರಿಜಿಸ್ಟಾರ್ ಕಚೇರಿ, ಕರ್ನಾಟಕ ಬ್ಯಾಂಕ್, ಬರೋಡಾ ಬ್ಯಾಂಕ್, ಉಜ್ಜೀವನ್ ಬ್ಯಾಂಕ್, ಬಿಎಸ್‍ಎನ್‍ಎಲ್ ಕಛೇರಿ, ಸೆಂಟ್ ಆನ್ಸ್ ಸ್ಕೂಲ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಕಛೇರಿ, ಶ್ರೀ ರಾಮ್ ಪೈನಾನ್ಸ್, ಮುದ್ರಣಾಲಯ, ಗ್ರಂಥಾಲಯ, ಆಸ್ಪತ್ರೆ, ಮಾಲ್ ಸೇರಿದಂತೆ ಬಹುತೇಕ ಜನಸೇರುವ ಕಚೇರಿಗಳೆ ಅಧಿಕವಾಗಿದ್ದು ಜೊತೆಗೆ ಇದೊಂದು ಲಿಂಕ್ ರಸ್ತೆ ಯಾಗಿರುವ ಕಾರಣ ಬಹುತೇಕ ವಾಹನ ಸವಾರರು ಸಂಚಾರಕ್ಕೆ ಈ ರಸ್ತೆಯನ್ನೇ ಹೆಚ್ಚು ಆಶ್ರಯಿಸಿರುವ ಕಾರಣ ಈ ರಸ್ತೆಯಲ್ಲಿ ಸಂಚಾರ ಸಹಜವಾಗೇ ಹೆಚ್ಚಾಗಿರುತ್ತದೆ.

ಪ್ರತಿನಿತ್ಯ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಸಹ ಇಲ್ಲಿ ವಾಹನಗಳ ನಿಲುಗಡೆಗಾಗಲಿ, ಸಾರ್ವಜನಿಕರ ಸುಗಮ ಸಂಚಾರಕ್ಕಾಗಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಸಂಚಾರಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ.

ವಿವಿಧ ಕಚೇರಿಗಳು, ಅಂಗಡಿ ಮುಂಗಟ್ಟುಗಳ ಮಾಲೀಕರುಗಳು, ಬ್ಯಾಂಕ್ ಸಿಬ್ಬಂದಿಗಳು ವಾಹನಗಳೆ ನೂರಾರು ಸಂಖ್ಯೆಯಲ್ಲಿದ್ದು ಇವರುಗಳ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಇಲ್ಲವಾಗಿದ್ದು, ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಮಾತು ದೂರವೇ ಸರಿ. ಬೆಳಿಗ್ಗೆ 10 ರಿಂದ ಹಿಡಿದು ಸಂಜೆ 5 ರ ವರೆಗೆ ಈ ರಸ್ತೆಯಲ್ಲಿ ಸುಗಮವಾಗಿ ನಡೆದಾಡುವುದು ಕಷ್ಟವೆನಿಸುವಷ್ಟರ ಮಟ್ಟಿಗೆ ಇಲ್ಲಿ ಸದಾ ಜನಜಂಗುಳಿ ಸೇರಿರುತ್ತದೆ.
*ಸಬ್ ರಿಜಿಸ್ಟಾರ್ ಕಚೇರಿಯಿಂದಲೇ ಸಮಸ್ಯೆ :*

ಈ ರಸ್ತೆಯಲ್ಲಿ ಇಷ್ಟೂಂದು ಸಂಚಾರ ವ್ಯತ್ಯಯ ಉಂಟಾಗಲು ಇಲ್ಲಿರುವ ಸಬ್ ರಿಜಿಸ್ಟಾರ್ ಕಚೆರಿಯೇ ಪ್ರಮುಖ ಕಾರಣವಾಗಿದ್ದು, ದಿನಿನಿತ್ಯ ಈ ಕಚೇರಿಗೆ ನೂರಾರು ಮಂದಿ ಆಗಮಿಸತ್ತಾ ಅವರೊಟ್ಟಿಗೆ ನಾಲ್ಕಾರು ವಾಹನಗಳು, ಹತ್ತಾರು ಸಂಬಂಧಿಕರು ಆಗಮಿಸುವ ಕಾರಣ ಅವರ ವಾಹನಗಳ ನಿಲುಗಡೆಯಿಂದ ಹೆಚ್ಚಿನ ತೊಂದರೆ ಉಂಟಾಗುತ್ತಿದೆ.

*ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆ:*

ಈ ರಸ್ತೆಯ ಕೊನೆಯಲ್ಲಿ ಸೆಂಟ್ ಆನ್ಸ್ ಶಾಲೆಯಿದ್ದು ಸಾವಿರಾರು ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದು, ಶಾಲಾ ವಾಹನಗಳು, ಪೋಷಕರುಗಳು ತಮ್ಮ ಮಕ್ಕಳನ್ನು ಕರೆತರಲು ಹಾಗೂ ಶಾಲೆಗೆ ಬಿಡಲು ಇದೇ ರಸ್ತೆಯನ್ನು ಬಳಸಿಕೊಳ್ಳುತ್ತಾರೆ. ಆದರೆ ಇಲ್ಲಿನ ವಿಪರೀತ ವಾಹನದಟ್ಟನೆಯಿಂದ ಮಕ್ಕಳು ಮತ್ತು ಪೋಷಕರುಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

*ಶಿವರಾಮ್(ಕೆಂಪ), ಮಾ.ಗ್ರಾ.ಪಂ.ಸದಸ್ಯರು.*

ನಗರದ ಪ್ರಮುಖ ರಸ್ತೆಯಾದ ಇದು ಲಿಂಕ್ ರಸ್ತೆಯಾಗಿದ್ದು, ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕಾರಣ ಬಹುತೇಕರು ಈ ರಸ್ತೆಯನ್ನೇ ಹೆಚ್ಚು ಬಳಕೆ ಮಾಡುತ್ತಾರೆ, ಆದರೆ ಇಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಪಾದಾಚಾರಿಗಳು ನಡೆದಾಡಲು ಇಲ್ಲಿ ಕಷ್ಟಸಾಧ್ಯವಾಗಿದೆ, ಕೆಲವಾರು ಬಾರಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಗಳು ಸಹ ನಡೆದಿದ್ದು, ಸಂಚಾರಿ ಪೊಲೀಸರು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕಾಗಿದೆ, ಎಂದು ಮಾಹಿತಿ ನೀಡಿದ್ದಾರೆ .

*ಶುಭಾಂಬಿಕಾ ಪಿಎಸ್‍ಐ ಸಂಚಾರಿ ಪೊಲೀಸ್ ಠಾಣೆ.*

ಕುವೆಂಪು ನಗರದ ರಸ್ತೆಯ ಸಂಚಾರದಟ್ಟಣೆ ಸಮಸ್ಯೆಯು ಗಮನಕ್ಕೆ ಬಂದಿದ್ದು, ಇಲ್ಲಿನ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಗೆ ಬ್ರೇಕ್ ಹಾಕಲಾಗುವುದು ಹಾಗೂ ಸೂಚನಾಫಲಕಗಳನ್ನು ಅಳವಡಿಸುವ ಮುಖಾಂತರ ಜಾಗೃತಿ ಮೂಡಿಸಿ, ಬಿಲ್ಡಿಂಗ್ ಮಾಲೀಕರುಗಳಿಗೂ ಎಚ್ಚರಿಕೆ ಕೊಡುವ ಕೆಲಸ ಮಾಡಲಾಗುವುದು,ನಾಳೆಯಿಂದಲೆ ರಸ್ತೆಯ ಒಂದು ಕಡೆ ಮಾತ್ರ ವಾಹನ ನಿಲ್ಲಿಸಲು ಸೂಚನೆ ನೀಡಿ ಸಿಬ್ಬಂದಿಯನ್ನು ನೇಮಿಸಲಾಗುವುದು,ಎಂದು ಮಾಹಿತಿ ನೀಡಿದ್ದಾರೆ ..

Share & Spread
error: Content is protected !!