ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರ ನ್ಯಾಯ ಸಮ್ಮತವಾಗಿದೆ: ಸುಪ್ರೀಂಕೋರ್ಟ್

ನವದೆಹಲಿ: ನೋಟುಗಳ ರದ್ದು  ತಪ್ಪಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ.

2016ರಲ್ಲಿ ಕೇಂದ್ರ ಸರ್ಕಾರ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಘೋಷಿಸಿದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ 58 ಅರ್ಜಿಗಳ ಕುರಿತು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ.

ಆರ್‌ಬಿಐ ಒಪ್ಪಿಗೆ ಪಡೆದೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ, ನೋಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ, ಸ್ವಯಂ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸುಗಳ ಅನ್ವಯ ಮಾತ್ರವೇ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಹೀಗಾಗಿ 2016ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಅಪನಗದೀಕರಣ ನೀತಿ ತಪ್ಪು ನಿರ್ಧಾರ ಎಂದು ವಾದಿಸಿದ್ದರು.

ಮತ್ತೊಂದೆಡೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಈ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಸರಿಯಲ್ಲ ಎಂದಿತ್ತು. ಜೊತೆಗೆ ಸಮಯವನ್ನು ಹಿಂದಕ್ಕೆ ಸರಿಸುವ, ಒಡೆದ ಮೊಟ್ಟೆಯನ್ನು ಮರುಜೋಡಿಸುವ ಇಂಥ ಯತ್ನಗಳಿಂದ ಯಾರಿಗೂ ಯಾವುದೇ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದಿತ್ತು. ಅಲ್ಲದೆ ನಕಲಿ ನೋಟು ತಡೆ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲಕ್ಕೆ ಕಡಿವಾಣ, ಕಪ್ಪುಹಣ ಮತ್ತು ತೆರಿಗೆ ವಂಚನೆ ತಡೆಯಲು ಅಪನಗದೀಕರಣ ಘೋಷಿಸಲಾಗಿದೆ. ಇದು ಸಾಕಷ್ಟು ಯೋಚಿಸಿ ಕೈಗೊಂಡ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿತ್ತು.

ನೋಟು ನಿಷೇಧದಿಂದ ನಾಗರೀಕರು ಕೆಲ ಕಾಲ ಸಮಸ್ಯೆಗಳನ್ನು ಎದುರಿಸಿದ್ದರು, ಆದರೆ ದೇಶಕಟ್ಟುವ ಕೆಲಸದಲ್ಲಿ ಇದು ಅನಿವಾರ್ಯ. ಆದರೆ, ಇಂಥ ಸಮಸ್ಯೆಗಳನ್ನು ಬಳಿಕ ಲಭ್ಯ ವ್ಯವಸ್ಥೆಯ ಮೂಲಕ ಪರಿಹರಿಸಲಾಯಿತು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌, ನ್ಯಾಯಾಲಯಕ್ಕೆ ಮಾಹಿತಿ ನೀಡಿತು.

Share & Spread
error: Content is protected !!