ಕೋವಿಡ್ ನಿಯಮಗಳ ಪಾಲಿಸಿ, ಸಾಧ್ಯವಾಗದಿದ್ದರೆ ಭಾರತ್ ಜೋಡೋ ಯಾತ್ರೆ ರದ್ದುಗೊಳಿಸಿ: ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಕೋವಿಡ್–19 ನಿಯಮಾವಳಿಗಳನ್ನು ಪಾಲನೆ ಮಾಡಿ. ಸಾಧ್ಯವಾಗದಿದ್ದರೆ ಭಾರತ್ ಜೋಡೊ ಯಾತ್ರೆಯನ್ನು ನಿಲ್ಲಿಸಿ ಎಂದು ಕಾಂಗ್ರೆಸ್’ಗೆ ಕೇಂದ್ರ ಸರ್ಕಾರ ಬುಧವಾರ ಸೂಚನೆ ನೀಡಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಭಾರತದಲ್ಲಿನ ಸ್ಥಿತಿಗತಿ ಕುರಿತು ಚರ್ಚಿಸಿ ಆರೋಗ್ಯ ಸಚಿವರು ಈ ಸೂಚನೆ ಕೊಟ್ಟಿದ್ದಾರೆಂದು ತಿಳಿದುಬಂದಿದೆ.

ಭಾರತ್ ಜೋಡೊ ಯಾತ್ರೆಯಲ್ಲಿ ಕೋವಿಡ್ ತಡೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಪಾಲನೆಯಾಗದಿದ್ದರೇ ಯಾತ್ರೆಯನ್ನು ನಿಲ್ಲಿಸುವುದು ಸೂಕ್ತ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ವಿಚಾರವನ್ನು ತಲೆಯಲ್ಲಿಟ್ಟುಕೊಳ್ಳಿ ಎಂದು ಪತ್ರದಲ್ಲಿ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ.

ಯಾತ್ರೆಯಲ್ಲಿ ಭಾಗವಹಿಸಿದ ನಂತರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕೊರೋನಾ ವೈರಸ್‌ ಸೋಂಕಿಗೆ ಒಳಗಾಗಿದ್ದನ್ನು ಉಲ್ಲೇಖಿಸಿ ರಾಜಸ್ಥಾನದ ಮೂವರು ಸಂಸದರ ಬರೆದಿರುವ ಪತ್ರವನ್ನು ಕೂಡ ಕೇಂದ್ರ ಸಚಿವರು ರಾಹುಲ್​ ಗಾಂಧಿಗೆ ಕಳುಹಿಸಿರುವ ಪತ್ರದಲ್ಲಿ ಲಗತ್ತಿಸಿದ್ದಾರೆ.

ಈ ನಡುವೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆ ಬುಧವಾರ ಬೆಳಿಗ್ಗೆ ಹರಿಯಾಣ ಪ್ರವೇಶಿಸಿದೆ.

Share & Spread
error: Content is protected !!