ಬೆಂಗಳೂರಿನ ಮಳೆ ಅವಾಂತರ ಸ್ಥಿತಿಗತಿ ಅರಿಯಲು ಖುದ್ದು ಭೇಟಿ ನೀಡುತ್ತೇನೆ, ಬಿಬಿಎಂಪಿ ಕಂಟ್ರೋಲ್ ರೂಂ ಸ್ಥಾಪನೆ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವಾರು ಕಡೆಗಳಲ್ಲಿ 100 ಮಿಲಿ ಮೀಟರ್ ಗಿಂತ ಜಾಸ್ತಿ ಮಳೆ ಸುರಿದಿದೆ. 90 ಮಿಲಿ ಮೀಟರ್ ಮಳೆ ಬಿದ್ದಾಗಲೇ ಬೆಂಗಳೂರಿಗೆ ಆತಂಕವಾಗುತ್ತದೆ. ಅಂತಹುದರಲ್ಲಿ ನಿನ್ನೆ 100 ಮಿಲಿ ಮೀಟರ್ ಗಿಂತ ಹೆಚ್ಚು ಬಿದ್ದಿರುವುದು ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿರುವುದು ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಬೆಳಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಹಲವು ಭಾಗಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಈಗಾಗಲೇ ನಿನ್ನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಇಂಜಿನಿಯರ್ ಗಳ ಬಳಿ ಮಾತನಾಡಿ ಟಾಸ್ಕ್ ಫೋರ್ಸ್, ಹೋಂ ಗಾರ್ಡ್ಸ್, ಎಸ್ ಡಿಆರ್ ಎಫ್ ಗಳನ್ನು ಕಾರ್ಯಪ್ರವೃತ್ತಗೊಳಿಸಿದ್ದೇವೆ ಎಂದರು.

 

ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಹೊರತೆಗೆಯುವ ಕೆಲಸಕ್ಕೆ ಆದೇಶ ನೀಡಿದ್ದು ಇಂದು ಮುಂಜಾನೆಯಿಂದಲೇ ನಡೆಯುತ್ತಿವೆ. ಖುದ್ದು ಬಿಬಿಎಂಪಿ ಆಯುಕ್ತರೇ ಕೆಲಸದ ಮೇಲ್ವಿಚಾರಣೆ ನೋಡುತ್ತಿದ್ದಾರೆ.ಈಗಾಗಲೇ ಬಿಬಿಎಂಪಿಯಿಂದ ಕಂಟ್ರೋಲ್ ರೂಂ ಸ್ಥಾಪನೆ ಮಾಡಲು ಹೇಳಿದ್ದೇವೆ ಎಂದರು.

ಮುಂದಿನ ಎರಡು ಮೂರು ದಿನ ಮಳೆಯಾಗುವ ನಿರೀಕ್ಷೆಯಿರುವುದರಿಂದ ಮುಂಜಾಗ್ರತೆ ಕ್ರಮ ವಹಿಸಲು ಸೂಚಿಸಿದ್ದೇವೆ. ಇಂದು ಹೊಸಕೆರೆಹಳ್ಳಿ, ಆರ್ ಆರ್ ನಗರ ಹಾಗೂ ಇನ್ನೆರಡು ಮೂರು ಕಡೆಗಳಿಗೆ ಇಂದು ನಾನು ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದೇನೆ. ಸೂಕ್ತ ಪರಿಹಾರ ಘೋಷಣೆ ಮಾಡುತ್ತೇವೆ ಎಂದರು.

ಒಳಚರಂಡಿಯನ್ನು ಸ್ವಚ್ಛಗೊಳಿಸಿ, ಕಾಮಗಾರಿ ಪೂರ್ಣಗೊಳಿಸಿ ಈ ಬಾರಿ ಕೂಡ ಮಳೆಗಾಲ ಆರಂಭಕ್ಕೆ ಬೆಂಗಳೂರಿನಲ್ಲಿ ಸಿದ್ಧತೆ ಮಾಡಿದ್ದೇವೆ. ಬೆಂಗಳೂರಿನ ಕೆಲವೆಡೆ ಕಾವೇರಿ 5ನೇ ಹಂತದ ಕಾಮಗಾರಿ, ಕೆಲವೆಡೆ ಗ್ಯಾಸ್ ಪೈಪ್ ಲೈನ್ ಸಂಪರ್ಕ ಕಾಮಗಾರಿ, ಕೆಲವೆಡೆ ಕೇಬಲ್ ಕೆಲಸಗಳು ನಡೆಯುತ್ತಿರುವುದರಿಂದ ನಿರಂತರವಾಗಿ ನಡೆಯುವುದರಿಂದ ಸಮಸ್ಯೆಯಾಗಿದೆ ಎಂದರು.

Share & Spread
error: Content is protected !!