ನವದೆಹಲಿ: ಭಾರತದಲ್ಲಿ ಟೆಲಿಡೆನ್ಸಿಟಿ ಮತ್ತು ಇಂಟರ್ನೆಟ್ ಬಳಕೆಯನ್ನು ವೇಗವಾಗಿ ವಿಸ್ತರಿಸಲಾಗುತ್ತಿದೆ. 21ನೇ ಶತಮಾನದಲ್ಲಿ ಈ ಸಂಪರ್ಕವು ದೇಶದ ಪ್ರಗತಿಯನ್ನು ನಿರ್ಧರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “5ಜಿ ನಮ್ಮ ಆರ್ಥಿಕತೆಗೆ $450 ಶತಕೋಟಿ ಕೊಡುಗೆ ನೀಡಲಿದೆ. ಇದು ಇಂಟರ್ನೆಟ್ ವೇಗವನ್ನು ಮಾತ್ರವಲ್ಲದೆ ಅಭಿವೃದ್ಧಿಯನ್ನೂ ಹೆಚ್ಚಿಸುತ್ತದೆ. ಈ ದಶಕದ ಅಂತ್ಯದ ವೇಳೆಗೆ, ನಾವು 6G ಸೇವೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ ಮತ್ತು ನಮ್ಮ ಕಾರ್ಯಪಡೆಯು ಅದರ ಮೇಲೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಹೇಳಿದರು.
“2ಜಿ ಯುಗವು ನೀತಿ ಪೀಡಿತ, ಭ್ರಷ್ಟಾಚಾರದ ಸಂಕೇತವಾಗಿದೆ. ರಾಷ್ಟ್ರವು ಪಾರದರ್ಶಕವಾಗಿ 4ಜಿ ಮತ್ತು ಈಗ 5ಜಿಯತ್ತ ಸಾಗಿದೆ. ಭಾರತದಲ್ಲಿ ಈ ಮೊದಲು ಎರಡು ಇದ್ದ ಮೊಬೈಲ್ ಉತ್ಪಾದನಾ ಘಟಕಗಳು ಈಗ 200ಕ್ಕೆ ವಿಸ್ತರಿಸಿದೆ. ಭಾರತ ಇಂದು ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಕೇಂದ್ರವಾಗಿದೆ. ಭಾರತವು ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸಿದೆ. ಇದರಿಂದ ದೇಶವು ಅಗ್ಗದ ಟೆಲಿಕಾಂ ಡೇಟಾ ಶುಲ್ಕಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಪ್ರಧಾನಿ ಹೇಳಿದರು.
ಐಐಟಿ ಮದ್ರಾಸ್ ನೇತೃತ್ವದಲ್ಲಿ ಒಟ್ಟು ಎಂಟು ಸಂಸ್ಥೆಗಳು ಬಹು-ಸಂಸ್ಥೆಗಳ ಸಹಯೋಗದ ಯೋಜನೆಯಾಗಿ ಅಭಿವೃದ್ಧಿಪಡಿಸಿದ 5G ಟೆಸ್ಟ್ ಬೆಡ್ ಅನ್ನು ಪ್ರಧಾನಿ ಮೋದಿ ಪ್ರಾರಂಭಿಸಿದರು.
ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.