ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಸಣ್ಣ ಸುಳಿವನ್ನೂ ಬಿಟ್ಟುಕೊಡದೆ ತಲೆ ಮರೆಸಿಕೊಂಡಿದ್ದ ಆರೋಪಿ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿದ್ದು ವಾಂಟೆಡ್ ಪೋಸ್ಟರ್ಸ್.
ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ಸಣ್ಣ ಸುಳಿವನ್ನೂ ಬಿಟ್ಟುಕೊಡದೆ ತಲೆ ಮರೆಸಿಕೊಂಡಿದ್ದ ಆರೋಪಿ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿದ್ದು ವಾಂಟೆಡ್ ಪೋಸ್ಟರ್ಸ್.
ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ನಾಗೇಶ್, ಎಸ್ಕೇಪ್ ಆಗಲು ಎಲ್ಲಿಲ್ಲದ ಪ್ಲಾನ್ ನಡೆಸಿದ್ದ.
ಏ.28ರ ಬೆಳಗ್ಗೆ ಆರೋಪಿ ಯುವತಿ ಮೇಲೆ ಆ್ಯಸಿಡ್ ಎರಚಿ ಸ್ಥಳದಿಂದ ಕಾಲ್ಕಿತ್ತಿದ್ದನು. ನಂತರ ಪೊಲೀಸರಿಗೆ ತನ್ನ ಸುಳಿವು ಸಿಗದಂತೆ ಮಾಡಲು ಟೆಕ್ನಿಕಲ್ ಎವಿಡೆನ್ಸ್ ಏನೂ ಸಿಗದಂತೆ ಮಾಡಿದ್ದ. ಮೊಬೈಲ್ ನ್ನು ರಿಸ್ಟೋರ್ ಮಾಡಿದ್ದಲ್ಲದೆ, ಎರಡೆರಡು ಬಾರಿ ಮೊಬೈಲ್ ಫ್ಲ್ಯಾಶ್ ಮಾಡಿ ಹೊಸಪೇಟೆಯಲ್ಲಿ ಮೊಬೈಲ್ ಎಸೆದು ಪರಾರಿಯಾಗಿದ್ದ.
ಆರೋಪಿಯ ಬಂಧನಕ್ಕೆ ತನಿಖೆಗೆ ಇಳಿದ ಪೊಲೀಸರಿಗೆ ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಸಿಗದೆ ತಲೆ ಬಿಸಿ ಮಾಡಿಕೊಂಡಿದ್ದರು. ಅಷ್ಟಕ್ಕೂ ಸುಮ್ಮನಾಗದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದರು. ಇಲ್ಲೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಪೊಲೀಸರು ತನಿಖೆಗಾಗಿ ವಾಂಟೆಡ್ ಭಿತ್ತಿ ಚಿತ್ರ ಬಳಸಿಕೊಂಡಿದ್ದರು.
ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಭಿತ್ತಿಪತ್ರಗಳ ಹಂಚಿದ್ದ ಪೊಲೀಸರು ಆಯಾ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಮಠ, ಮಂದಿರ, ಧಾರ್ಮಿಕ ಕೇಂದ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಅಂಟಿಸಿದ್ದರು.
ತಮಿಳುನಾಡಿನ ಸಿಟಿಗಳಲ್ಲಿ ಭಾವಚಿತ್ರ ಸಹಿತ ಭಿತ್ತಿಚಿತ್ರಗಳನ್ನು ಹೆಚ್ಚು ಹೈಲೈಟ್ ಮಾಡಲಾಗಿದ್ದರಿಂದ ಸ್ಥಳೀಯರು ಮಾರುವೇಷದಲ್ಲಿರುವ ನಾಗೇಶ್ನ ಸುಳಿವು ಪೊಲೀಸರಿಗೆ ನೀಡಿದ್ದಾರೆ.
ಪೋಸ್ಟರ್ ನೋಡಿದ್ದ ಸ್ಥಳೀಯರೊಬ್ಬರು ಆಶ್ರಮದಲ್ಲಿ ಪೋಸ್ಟರ್ ನಲ್ಲಿರುವ ವ್ಯಕ್ತಿಯನ್ನು ಹೋಲುವ ವ್ಯಕ್ತಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಪೊಲೀಸರು ವ್ಯಕ್ತಿಯ ಫೋಟೋ ತೆಗೆದು ವಾಟ್ಸಾಪ್ ಮಾಡುವಂತೆ ತಿಳಿಸಿದ್ದಾರೆ. ಕೇಸರಿ ಬಟ್ಟೆಯಲ್ಲಿ ಧ್ಯಾನದಲ್ಲಿ ಕುಳಿತಿರುವ ಭಂಗಿಯಲ್ಲಿ ಆರೋಪಿ ನಾಗೇಶ್ ಫೋಟೋವನ್ನು ವ್ಯಕ್ತಿ ಪೊಲೀಸರಿಗೆ ಕಳುಹಿಸಿದ್ದಾರೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಇಬ್ಬರು ಅಧಿಕಾರಿಗಳನ್ನು ರವಾನಿಸಿದ್ದಾರೆ.
ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಧ್ಯಾನದಲ್ಲಿದ್ದ ಆರೋಪಿಯನ್ನು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ನಂತರ ಆತನನ್ನು ಬಂಧಿಸಲು ಮುಂದಾಗಿದ್ದು, ಈ ವೇಳೆ ಆರೋಪಿ ಕೂಗಾಡಿದ್ದಾರೆ. ಆಶ್ರಮದ ಸಿಬ್ಬಂದಿಗಳನ್ನು ಕರೆದು, ಪೊಲೀಸರ ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಬಳಿಕ ಅಧಿಕಾರಿಗಳು ಇತರೆ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ.
ಹಿರಿಯ ಅಧಿಕಾರಿಗಳು ಆಶ್ರಮದವರಿಗೆ ಘಟನೆ ಬಗ್ಗೆ ವಿವರಿಸಿದ್ದಾರೆ. ಆಶ್ರಮದಲ್ಲಿ ತನ್ನ ಅಗತ್ಯತೆಗಳು ಉಚಿತವಾಗಿ ಸಿಗುವ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದಾನೆಂದು ತಿಳಿಸಿದ್ದಾರೆ. ಬಳಿಕ ಆಶ್ರಮದವರು ಆರೋಪಿ ವಶಕ್ಕೆ ಪಡೆಯಲು ಅನುವು ಮಾಡಿಕೊಟ್ಟಿದ್ದರು ಎಂದು ತಿಳಿದುಬಂದಿದೆ.