ಕರ್ನಾಟಕ ಸೇರಿದಂತೆ ದೇಶದಲ್ಲಿ ಕೊರೊನಾ ವೈರಸ್ ನ ನಾಲ್ಕನೇ ಅಲೆಯ ಆತಂಕದ ನಡುವೆ ಮತ್ತೊಂದು ಜ್ವರದ ಹೆಸರು ಕೇಳಿಬರುತ್ತಿದ್ದು ಜನರನ್ನು ಕಂಗೆಡಿಸಿದೆ. ಕೇರಳದಲ್ಲಿ ಪತ್ತೆಯಾಗಿರುವ ಜ್ವರಕ್ಕೆ ಟೊಮೆಟೋ ಜ್ವರ ಎಂದು ಕರೆಯಲಾಗುತ್ತಿದ್ದು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದಲ್ಲಿ ಕೊರೊನಾ ವೈರಸ್ ನ ನಾಲ್ಕನೇ ಅಲೆಯ ಆತಂಕದ ನಡುವೆ ಮತ್ತೊಂದು ಜ್ವರದ ಹೆಸರು ಕೇಳಿಬರುತ್ತಿದ್ದು ಜನರನ್ನು ಕಂಗೆಡಿಸಿದೆ. ಕೇರಳದಲ್ಲಿ ಪತ್ತೆಯಾಗಿರುವ ಜ್ವರಕ್ಕೆ ಟೊಮೆಟೋ ಜ್ವರ(Tomato flu) ಎಂದು ಕರೆಯಲಾಗುತ್ತಿದ್ದು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.
ಟೊಮೆಟೋ ಜ್ವರ ಒಂದು ರೀತಿಯ ಜ್ವರವಾಗಿದ್ದು ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಹೆಚ್ಚು ಪರಿಣಾಮ ಉಂಟುಮಾಡುತ್ತದೆ. ದೇಹದಲ್ಲಿ ಗುಳ್ಳೆಗಳು, ಕೆಂಪು ಬಣ್ಣದ ದದ್ದುಗಳು, ಜ್ವರ, ಚರ್ಮದಲ್ಲಿ ಕಿರಿಕಿರಿ, ಸುಸ್ತು, ಸೆಳೆತ, ಕೀಲುಗಳಲ್ಲಿ ಊಟ, ಊಟ-ತಿಂಡಿ ರುಚಿಸದಿರುವುದು ಈ ಜ್ವರ ಲಕ್ಷಣಗಳಾಗಿವೆ.
ಆರೋಗ್ಯ ಸಚಿವರು ಹೇಳುವುದೇನು?: ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಕೋವಿಡ್ ಜ್ವರಕ್ಕೂ(Covid-19) ಟೊಮೆಟೋ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಹೊಸದಾಗಿ ಕಂಡುಬಂದಿರುವ ರೋಗವಲ್ಲವಲ್ಲ, ಕೆಲವು ವರ್ಷಗಳಿಂದ ಕೇರಳದಲ್ಲಿ ಆಯಾ ಪ್ರದೇಶಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದೆ. ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಸಾಮಾನ್ಯವಾಗಿ ಬರುತ್ತವೆ ಎಂದರು.
ಕೇರಳದಿಂದ ಕರ್ನಾಟಕಕ್ಕೆ ಬರುವ ಜನರನ್ನು ತಪಾಸಣೆ ಮಾಡಲು ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನಿನ್ನೆ ಸೂಚನೆ ನೀಡಿದ್ದೇನೆ. ಪ್ರಯಾಣಿಕರ ಮೇಲೆ ವಿಶೇಷ ನಿಗಾವಹಿಸುವಂತೆ ಆದೇಶ ನೀಡಿದ್ದೇನೆ. ಮಕ್ಕಳಿಗೆ ಜ್ವರ ಬರುವುದು, ದೇಹದಲ್ಲಿ ಗುಳ್ಳೆಗಳಾಗುವುದು ಕಂಡುಬಂದರೆ ಟೆಸ್ಟ್ ಗಳನ್ನು ಮಾಡಿ ನಿಗಾ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದರು.
ಟೊಮೆಟೋ ಜ್ವರ ಸಾಂಕ್ರಾಮಿಕವಲ್ಲ. ಕೇವಲ ಕೇರಳ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇವೆ, ಯಾರೂ ಆತಂಕಗೊಳಗಾಗಬೇಕಿಲ್ಲ. ಕೇರಳ ಆರೋಗ್ಯ ಸಚಿವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದರು.
ಕೇರಳದ ಗಡಿ ಜಿಲ್ಲೆಗಳಲ್ಲಿ ಇದುವರೆಗೆ ಯಾವುದೇ ಮಕ್ಕಳೂ ಟೊಮೆಟೋ ಫ್ಲೂನಿಂದ ದಾಖಲಾಗಿಲ್ಲ. ಐದಾರು ಜಿಲ್ಲೆಗೆ ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ನಿಗಾ ಇಡಬೇಕು. ಯಾವುದೇ ಮಕ್ಕಳಿಗೂ ಜ್ವರ ಬಂದರೂ ಟೆಸ್ಟ್ ಮಾಡಬೇಕೆಂದು ಸೂಚನೆ ನೀಡಿದ್ದೇನೆ ಎಂದರು.
ಕೋವಿಡ್ ನ ಯಾವುದೇ ಗಂಭೀರ ಪರಿಸ್ಥಿತಿ ಸದ್ಯಕ್ಕೆ ರಾಜ್ಯದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.