ಡಿಜಿಪಿ ರವೀಂದ್ರನಾಥ್‌ ರಾಜಿನಾಮೆ ಅಂಗೀಕರಿಸಬೇಡಿ: ಹೆಚ್ ಡಿ ಕುಮಾರಸ್ವಾಮಿ

ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಯಮಬಾಹಿರ ವರ್ಗಾವಣೆ ಮಾಡಿದ್ದರಿಂದ ಬೇಸತ್ತು ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಪಿ.ರವೀಂದ್ರನಾಥ್ ಅವರು ನೀಡಿರುವ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಸರ್ಕಾರ ಯಾರ ಬಾಲಂಗೋಚಿ ಎನ್ನುವುದು ಈ ವರ್ಗಾವಣೆ ಒಂದರಿಂದಲೇ ಅರ್ಥವಾಗುತ್ತದೆ. ಏಕೆಂದರೆ, ಆರೋಪಿತ ನಿವೃತ್ತ ಅಧಿಕಾರಿ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಇಲಾಖೆ ಸಲಹೆಗಾರರಾಗಿದ್ದರು. 5 ವರ್ಷ ರಾಜ್ಯವನ್ನಾಳಿದ ಮುಖ್ಯಮಂತ್ರಿಗೆ ಆಪ್ತರೂ ಆಗಿದ್ದರು. ಅವರಿಗೆ ನೋಟೀಸ್ ನೀಡಿದಾಕ್ಷಣ ಡಾ.ರವೀಂದ್ರನಾಥ್ʼರನ್ನು ವರ್ಗಾವಣೆ ಮಾಡಲಾಗಿದೆ. ಹಾಗಾದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ಒಳ ಒಪ್ಪಂದವೇನು? ಒಬ್ಬ ದಲಿತ ಅಧಿಕಾರಿಯನ್ನು ಬಲಿ ಹಾಕಲು ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸಿದ ಷಡ್ಯಂತ್ರ ಇದು ಎಂಬುದು ನನ್ನ ನೇರ ಆರೋಪ.
ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರ ನೀಡಿದ ನಾಯಕರ ಆಪ್ತರಾಗಿದ್ದ ನಿವೃತ್ತ ಅಧಿಕಾರಿ ವಿರುದ್ಧ ಕೇಳಿಬಂದಿರುವುದು ಅತಿ ಗಂಭೀರ ಆರೋಪ. ಅಂಥ ವ್ಯಕ್ತಿಯನ್ನು ರಕ್ಷಣೆ ಮಾಡುವ ಅಗತ್ಯ ಬಿಜೆಪಿ ಸರ್ಕಾರಕ್ಕೆ ಏನಿದೆ? ಎಲ್ಲಿಂದ, ಯಾರು, ಯಾರ ಮೇಲೆ ಒತ್ತಡ ಹೇರಿದ್ದಾರೆ? ಯಾರು, ಯಾರ ಋಣ ಚುಕ್ತಾ ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಬೇಕಿದೆ. ಡಾ.ರವೀಂದ್ರನಾಥ್ ಅವರ ವಿಷಯದಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಪ್ರಾಮಾಣಿಕ ಅಧಿಕಾರಿಗಳಿಗೆ ದೊಡ್ಡ ಬೆದರಿಕೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವೀಂದ್ರನಾಥ ರಾಜೀನಾಮೆ ಹಿಂಪಡೆದರೆ ಅಭ್ಯಂತರವಿಲ್ಲ: ಮುಖ್ಯ ಕಾರ್ಯದರ್ಶಿ
ಇತ್ತ ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರನಾಥ ಅವರ ರಾಜೀನಾಮೆ ಅಂಗೀಕರಿಸದಂತೆ ಅನುಸೂಚಿತ ಜಾತಿ ಪಂಗಡಗಳ ಸಮಿತಿ ಒತ್ತಾಯ ಮಾಡಿದೆ. ಸಮಿತಿ ಅಧ್ಯಕ್ಷ ಎಂ.ಪಿ.‌ಕುಮಾರಸ್ವಾಮಿ ನೇತೃತ್ವದ ಸಮಿತಿ ಸದಸ್ಯರು ರಾಜ್ಯ ಮುಖ್ಯ ಕಾರ್ಯದರ್ಶಿಗಳ ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ವೇಳೆ ಶಾಸಕರಾದ ಮಹೇಶ್, ಪಿ.ರಾಜೀವ್, ಅಬ್ಬಯ್ಯ, ಪ್ರಸಾದ್, ಪ್ರೊ. ಲಿಂಗಣ್ಣ ಇನ್ನಿತರರು ಹಾಜರಿದ್ದರು.

ಹಿರಿಯ ಐಪಿಎಸ್ ಅಧಿಕಾರಿ ರವೀಂದ್ರ ನಾಥ್ ತಮ್ಮ ರಾಜೀನಾಮೆ ಹಿಂಪಡೆಯಲು ತಮ್ಮ ಅಭ್ಯಂತರವಿಲ್ಲ ಎಂದು ಮುಖ್ಯ ಕಾರ್ಯದರ್ಶಿಗಳು ನಿಯೋಗಕ್ಕೆ ಭರವಸೆ ನೀಡಿದ್ದಾರೆ. ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದ ಆರೋಪದ ಹಿನ್ನೆಲೆಯಲ್ಲಿ ರವೀಂದ್ರನಾಥ ಅವರಿಗೆ ಸಬಂಧಿಸಿದವರಿಗೆ ಎಸ್ ಸಿ ಎಸ್ಟಿ ಸಮಿತಿ ನೊಟಿಸ್ ಜಾರಿ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Share & Spread
error: Content is protected !!