ಹಾಲಿ ಶಾಸಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಸ್ವಪ್ರತಿಷ್ಟೆಯ ಗುದ್ದಾಟದಲ್ಲಿ ಚನ್ನಪಟ್ಟಣದ ತಹಶೀಲ್ದಾರ್ ವರ್ಗಾವಣೆಯನ್ನು ಚಿಕ್ಕಮಕ್ಕಳಂತೆ ಆಟವಾಡುತ್ತಿದ್ದಾರೆ. ಇದರಿಂದ ತಾಲ್ಲೂಕು ಕಛೇರಿಯಲ್ಲಿ ನಡೆಯಬೇಕಾದ ತಾಲ್ಲೂಕಿನ ರೈತರ, ಸಾಮಾನ್ಯರ ಕೆಲಸಗಳು ನೆನೆಗುದಿಗೆ ಬಿದ್ದಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇವಲ 24 ಗಂಟೆಗಳಲ್ಲಿ 3 ಬಾರಿ ತಹಶೀಲ್ದಾರ್ ವರ್ಗಾವಣೆ ಅಂದರೆ ಅದರ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಬಹುದು
ಚನ್ನಪಟ್ಟಣ : ಶುಕ್ರವಾರವಷ್ಟೇ ಚನ್ನಪಟ್ಟಣ ತಾಲ್ಲೂಕಿಗೆ ನೂತನ ತಹಶೀಲ್ದಾರರಾಗಿ ಬಿ.ಕೆ. ಸುದರ್ಶನ್ ಅವರನ್ನು ನೇಮಕ ಮಾಡಿದ್ದ ರಾಜ್ಯ ಸರ್ಕಾರ, ದಿಢೀರನೆ ಬಿ.ಕೆ. ಸುದರ್ಶನ್ ಎತ್ತಂಗಡಿ ಮಾಡಿ ಆ ಸ್ಥಾನಕ್ಕೆ ಜೆ.ಪಿ. ಹರ್ಷವರ್ಧನ್‌ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ತಹಶೀಲ್ದಾರ ಬಿ.ಕೆ. ಸುದರ್ಶನ್ ಅವರನ್ನು ಯೋಜನಾ ವ್ಯವಸ್ಥಾಪಕರು, ಕುಟುಂಬ ಇ-ಆಡಳಿತ ಕೇಂದ್ರ, ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ತಾಲ್ಲೂಕಿಗೆ ಮೂರನೇ ತಹಶೀಲ್ದಾರರನ್ನು ತಾಲ್ಲೂಕಿನ ಜನತೆ ನೋಡಿದಂತಾಗಿದೆ. ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಒತ್ತಡಕ್ಕೆ ಮಣಿದು ನಾಗೇಶ್ ಅವರನ್ನು ಎತ್ತಂಗಡಿ ಮಾಡಿದ್ದ ಸರ್ಕಾರ, ಮತ್ತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರೋಧಕ್ಕೆ ಹೆದರಿ ಹರ್ಷವರ್ಧನ್ ಅವರನ್ನು ನೇಮಕ ಮಾಡಿದೆ ಎನ್ನಲಾಗಿದೆ.
ಎಚ್‌ಡಿಕೆ ತಮ್ಮ ಅಪ್ತ ನಾಗೇಶ್ ಪರ ಬ್ಯಾಂಟಿಗ್ ಮಾಡಿದರೆ. ಇತ್ತ ಸಿಪಿವೈ ತಮ್ಮ ಅಪ್ತ ಬಿ.ಕೆ. ಸುದರ್ಶನ್ ಪರ ಬ್ಯಾಟಿಂಗ್ ಮಾಡಿದ್ದರು. ಇಬ್ಬರು ನಾಯಕರ ಒತ್ತಡಕ್ಕೆ ಮ್ಯೂಜಿಕಲ್ ಚೇರ್ ಅಂತಾಗಿರುವ ಚನ್ನಪಟ್ಟಣ ತಹಶೀಲ್ದಾರ ಸ್ಥಾನಕ್ಕೆ ಮೂರನೇ ವ್ಯಕ್ತಿಯನ್ನು ನಿಯೋಜಿಸಿ ಸರ್ಕಾರ ಜಾಣನಡೆ ಪ್ರದರ್ಶಿಸಿದೆ. ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದ ಬಿ.ಕೆ. ಸುದರ್ಶನ್ ಕಳೆದ ಕೆಲವು ತಿಂಗಳಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನಡುವೆ ಏರ್ಪಟ್ಟಿದ್ದ ಚನ್ನಪಟ್ಟಣ ತಾಲ್ಲೂಕು ತಹಶೀಲ್ದಾರ ವರ್ಗಾವಣೆ ಕುಸ್ತಿಯಲ್ಲಿ ಕೊನೆಗೂ ಸಿ.ಪಿ. ಯೋಗೇಶ್ವರ್ ಮೇಲುಗೈ ಸಾಧಿಸಿದ್ದರು.
ಚನ್ನಪಟ್ಟಣ ತಾಲ್ಲೂಕಿನ ನೂತನ ತಹಶೀಲ್ದಾರ ಆಗಿ ಬಿ.ಕೆ. ಸುದರ್ಶನ್ ಶುಕ್ರವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದರು. ತಹಶೀಲ್ದಾರ ನಾಗೇಶ್ ಅವರನ್ನು ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಬಿ.ಕೆ. ಸುದರ್ಶನ್ ಅವರನ್ನು ನೇಮಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಎನ್. ಸುಶೀಲಾ ಆದೇಶ ಹೊರಡಿಸಿದ್ದರು. ನಿರ್ಗಮಿತ ತಹಶೀಲ್ದಾರ ನಾಗೇಶ್ ಅವರಿಗೆ ಸರ್ಕಾರ ಯಾವುದೇ ಸ್ಥಳ ನಿಯುಕ್ತಿ ಮಾಡಿರಲಿಲ್ಲ. ಜಿಲ್ಲಾಧಿಕಾರಿಗಳಿಂದ ಅಧಿಕಾರ ಸ್ವೀಕರಿಸಿದ ಬಿ.ಕೆ. ಸುದರ್ಶನ್ ಕಳೆದ 20 ದಿನಗಳ ಹಿಂದೆ ವರ್ಗಾವಣೆ ಆದೇಶ ಪತ್ರದೊಂದಿಗೆ ತಾಲ್ಲೂಕು ತಹಶೀಲ್ದಾರ್ ಅಧಿಕಾರ ವಹಿಸಿಕೊಳ್ಳಲು ಬಂದ ಬಿ.ಕೆ. ಸುದರ್ಶನ್‌ರವರಿಗೆ ಕೆಲ ಗಂಟೆಯಲ್ಲೇ ಸರ್ಕಾರ ತಮ್ಮ ನೇಮಕವನ್ನು ಹಿಂಪಡೆದಿದ್ದು ಮುಜುಗರ ತಂದಿತ್ತು. ಹಾಗಾಗಿ ಈ ಬಾರಿ ವರ್ಗಾವಣೆ ಸುದ್ದಿ ಹರಡುವ ಮೊದಲೇ ತಹಶೀಲ್ದಾರರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸರ್ಕಾರದ ವರ್ಗಾವಣೆಯ ಆದೇಶ ಪ್ರತಿ ಕೈ ಸೇರಿದ ತಕ್ಷಣ ಯಾರಿಗೂ ಸುಳಿವು ಬಿಟ್ಟುಕೊಡದೆ ಜಿಲ್ಲೆಗೆ ಆಗಮಿಸಿದ ಬಿ.ಕೆ. ಸುದರ್ಶನ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ಅವರಿಂದ ಅಧಿಕಾರ ಸ್ವೀಕಾರ ಮಾಡಿ ಚನ್ನಪಟ್ಟಣ ತಾಲ್ಲೂಕು ಕಚೇರಿಗೆ ಆಗಮಿಸಿದ ಅವರು, ಶುಕ್ರವಾರವೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ತಾಲೂಕು ತಹಶೀಲ್ದಾರ್ ಆಗಿ ಹರ್ಷವರ್ಧನ್ ಅಧಿಕಾರ ಸ್ವೀಕಾರ
ತಾಲೂಕಿನ ತಹಶೀಲ್ದಾರ್ ಸುದರ್ಶನ್ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಹರ್ಷವರ್ಧನ್ ಅವರನ್ನು ವರ್ಗಾವಣೆ ಮಾಡಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಎನ್. ಸುಶೀಲಾ ಆದೇಶ ಹೊರಡಿಸಿದ್ದಾರೆ . ಶುಕ್ರವಾರವಷ್ಟೇ ಇದೇ ಅಧಿಕಾರಿಗಳು ತಾಲೂಕಿಗೆ ಬಿ.ಕೆ.ಸುದರ್ಶನ್ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಿದ್ದರು . ಈ ನಿಟ್ಟಿನಲ್ಲಿ ಶುಕ್ರವಾರ ತಾಲೂಕು ಕಚೇರಿಗೆ ಬಂದ ಬಿ.ಕೆ.ಸುದರ್ಶನ್ ಅವರು ನಾಗೇಶ್ ಅವರ ಅನುಪಸ್ಥಿತಿಯಲ್ಲಿ ಸರ್ಕಾರದ ಸೂಚನೆಯಂತೆ ಅಧಿಕಾರ ಸ್ವೀಕಾರ ಮಾಡಿದ್ದರು . ಆದರೆ ಇದೀಗ ಅದೇ ಅಧಿಕಾರಿಗಳು ಹರ್ಷವರ್ಧನ್ ಅವರನ್ನು ತಾಲೂಕು ದಂಡಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಹರ್ಷವರ್ಧನ್ ಅವರು ಶನಿವಾರ ರಾತ್ರಿ 8 ಗಂಟೆಗೆ ತಾಲ್ಲೂಕು ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು.
ಇನ್ನು ಚನ್ನಪಟ್ಟಣದ ರಾಜಕೀಯ ಪಕ್ಷಗಳ ಕಾರ್ಯಕರ್ತರ ಸಾಮಾಜಿಕ ಜಾಲತಾಣಗಳ ಸ್ಟೇಟಸ್‌ಗಳಲ್ಲಂತು ವರ್ಗಾವಣೆಯ ಪ್ರತಿಬಾರಿ ವೀರಾವೇಶದ ಹಾಡುಗಳೊಂದಿಗೆ ಕುಮಾರಸ್ವಾಮಿ ಮತ್ತು ಯೋಗೇಶ್ವರ್‌ರ ಭಾವಚಿತ್ರಗಳೋಂದಿಗೆ ರಾರಾಜಿಸುತ್ತಿವೆ.