ಪಂಚಾಯತ್ ಮಟ್ಟದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಆಯುಷ್ಮಾನ್ ಕಾರ್ಡ್ ವಿತರಿಸಲು ಆರು ತಿಂಗಳ ಗಡುವವನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ನಿಗದಿ ಮಾಡಿದ್ದಾರೆ.
ಬೆಂಗಳೂರು: ಪಂಚಾಯತ್ ಮಟ್ಟದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಆಯುಷ್ಮಾನ್ ಕಾರ್ಡ್ ವಿತರಿಸಲು ಆರು ತಿಂಗಳ ಗಡುವವನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ನಿಗದಿ ಮಾಡಿದ್ದಾರೆ.
ಆಯುಷ್ಮಾನ್ ದಿವಸ್- ಆರೋಗ್ಯ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಆಯುಷ್ಮಾನ್ ಭಾರತ್ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಮತ್ತು ಯೋಜನೆಗೆ 960 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದೆ. ಪ್ರಧಾನಿ ಮೋದಿಯವರು ಆಯುಷ್ಮಾನ್ ಕಾರ್ಡ್ ಮೂಲಕ ಎಲ್ಲಾ ನಾಗರಿಕರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸಿದ್ದಾರೆ. ಇದರಂತೆ ಪ್ರತಿಯೊಬ್ಬ ನಾಗರಿಕರೂ ಕಾರ್ಡ್ ಪಡೆದುಕೊಂಡಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
6.68 ಕೋಟಿ ಜನರು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಾಜ್ಯವು ಮೂರನೇ ಅತಿ ಹೆಚ್ಚು 997 ಜನೌಷದಿ ಕೇಂದ್ರಗಳನ್ನು ಹೊಂದಿದೆ. ಸರ್ಕಾರಿ ವೈದ್ಯಕೀಯ ಅಧಿಕಾರಿಗಳು ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗೆ ಒತ್ತು ನೀಡಬೇಕು ಮತ್ತು ಜನರು ತಮ್ಮ ಆಹಾರ ಮತ್ತು ಜೀವನಶೈಲಿಯ ಅಭ್ಯಾಸಗಳ ಮೇಲೆ ನಿಗಾ ಇಡಬೇಕೆಂದು ಹೇಳಿದ್ದಾರೆ.
ಎಲ್ಲಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ರಕ್ತದೊತ್ತಡ ಮತ್ತು ಮಧುಮೇಹದ ತಪಾಸಣೆ ಇರಬೇಕು ಮತ್ತು ವರದಿಗಳನ್ನು ಇಲಾಖೆಗೆ ಕಳುಹಿಸಬೇಕು ಮತ್ತು ರಾಜ್ಯ ಮಟ್ಟದಲ್ಲಿ ಸಂಗ್ರಹಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಸಚಿವರು, 6,085 ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಇತರ ವೈದ್ಯಕೀಯ ವೃತ್ತಿಪರರಿಗೆ ಪ್ರಮಾಣ ವಚನ ಬೋಧಿಸಿದರು.