ರಾಮನಗರ, ಫೆ. 01 : ಧನಶ್ರೀ ಯೋಜನೆಯಡಿ ಎಚ್.ಐ.ವಿ ಸೋಂಕಿತ ಹಾಗೂ ಬಾಧಿತ ಮಹಿಳೆಯರಿಗೆ ಮಾನಸಿಕವಾಗಿ ಆತ್ಮಸ್ಥ್ಐರ್ಯ ನೀಡಿ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಆರ್ಥಿಕ ಚಟುವಟಿಕೆ ನಡೆಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಪ್ರೋತ್ಸಾಹ ಧನ ಸೌಲಭ್ಯ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.
ಅವರು ಫೆ. 1ರ ಗುರುವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ 2023-24ನೇ ಸಾಲಿಗೆ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಆಯ್ಕೆ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಿಂಗತ್ವ ಅಲ್ಪಸಂಖ್ಯಾತರು, ಎಚ್.ಐ.ವಿ ಸೋಂಕಿತರು ಹಾಗೂ ದಮನಿತ ಮಹಿಳೆಯರಿಗೆ ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ರೀತಿಯ ಆರ್ಥಿಕ ಚಟುವಟಿಕೆ ಕೈಗೊಳ್ಳಲು 30,000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ. ಧನಶ್ರೀ ಯೋಜನೆಯಡಿ ಅರ್ಹ 9 ಅರ್ಜಿಗಳು ಸ್ವೀಕೃತವಾಗಿವೆ, ಲಿಂಗತ್ವ ಅಲ್ಪಸಂಖ್ಯಾತರಿಗೆ ಪುನರ್ವಸತಿ ಯೋಜನೆಯಡಿ ಅರ್ಹರಿದ್ದ 21 ಅರ್ಜಿಗಳು, ಚೇತನ ಯೋಜನೆಯಡಿ ಅರ್ಹ 5 ಜನ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಉದ್ಯೋಗಿನಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು, ಎಚ್.ಐ.ವಿ ಸೋಂಕಿತ ಹಾಗೂ ಬಾಧಿತ ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕಿನಿAದ ಸಾಲ ಹಾಗೂ ಮಹಿಳಾ ಅಭಿವೃದ್ಧಿ ನಿಗಮದಿಂದ ಸಹಾಯಧನ ಸೌಲಭ್ಯ ನೀಡಲು ಅವಕಾಶವಿದೆ. 3 ಲಕ್ಷ ರೂ.ಗಳು ಹಾಗೂ ಮಹಿಳಾ ಅಭಿವೃಧ್ಧಿ ನಿಗಮದಿಂದ ಶೇ. 50 ರಷ್ಟು ಸಹಾಯಧನ ಸೌಲಭ್ಯ ನೀಡಲಾಗುವುದು. ಈ ಯೋಜನೆಯಡಿ ಸೇವಾಸಿಂಧು ಪೋರ್ಟಲ್ ನಿಂದ ಪರಿಶಿಷ್ಟ ಜಾತಿಯ 8 ಅರ್ಜಿಗಳು ಹಾಗೂ ಪರಿಶಿಷ್ಟ ಪಂಗಡದ ಒಟ್ಟು 3 ಅರ್ಜಿಗಳು ಸ್ವೀಕೃತವಾಗಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಾಂತಿಪ್ರಿಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕರಾದ ಗಾಯಿತ್ರಿ ದೇವಿ ಬಿ., ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.